ಕೋಲಾರ:- ಜಿಲ್ಲೆ ಕೆಜಿಎಫ್ ತಾಲ್ಲೂಕು ಕೊತ್ತೂರು ಗ್ರಾಮದಲ್ಲಿ ಚಾಕುವಿನಿಂದ ಇರಿದು ಅತ್ತಿಗೆಯನ್ನೇ ಮೈದುನ ಕೊಲೆ ಮಾಡಿರುವ ಘಟನೆ ಜರುಗಿದೆ.
ಬುಧವಾರ ರಾತ್ರಿ ಈ ಗ್ರಾಮದಲ್ಲಿ ತನ್ನ ಅತ್ತಿಗೆಯನ್ನು ಮೈದುನನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ, ತೇಜಸ್ವಿನಿ ಕೊಲೆಯಾದ ಮಹಿಳೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ಕೊತ್ತೂರು ಗ್ರಾಮದ ಪಕ್ಕದಲ್ಲಿರುವ ಬ್ಯಾಟರಾನಹಳ್ಳಿ ಗ್ರಾಮದಲ್ಲಿ ಮುರಳಿ ಹಾಗೂ ಚಲಪತಿ ಅಣ್ಣ ತಮ್ಮಂದಿರಿದ್ದಾರೆ. ಈ ಪೈಕಿ ಮುರಳಿ ಹಾಗೂ ಚಲಪತಿ ನಡುವೆ ಹಲವು ವರ್ಷಗಳಿಂದ ತಮ್ಮೂರಿನಲ್ಲಿರುವ ಮೂರು ಎಕರೆ ಭೂಮಿಗೆ ಸಂಬಂಧಿಸಿದಂತೆ ವಿವಾದ ಇತ್ತು.
ಈ ಸಂಬಂಧ ಗಲಾಟೆ ಇತ್ತು. ಕಾರಣ ಮುರಳಿ ಪಿತ್ರಾರ್ಜಿತ ಅಸ್ತಿಯಲ್ಲಿ ಭಾಗ ಕೇಳಿದ್ದ ಅನ್ನೋ ಕಾರಣಕ್ಕೆ ಆಗಾಗ ಗಲಾಟೆ ನಡಯುತ್ತಲೇ ಇತ್ತು. ಮರುಳಿ ಎರಡು ಮದುವೆಯಾಗಿದ್ದ. ಈ ಪೈಕಿ ನಿನ್ನೆ ಬುಧವಾರ ಎರಡನೇ ಪತ್ನಿ ತೇಜಸ್ವಿನಿ ಮನೆಯಲ್ಲಿದ್ದಾಗ ಚಲಪತಿ ತನ್ನ ಮೂರು ಜನ ಸ್ನೇಹಿತರೊಂದಿಗೆ ಮನೆಗೆ ಬಂದು ನುಗ್ಗಿ ಮನೆಯ ಬಾಗಿಲಲ್ಲೇ ಇದ್ದ ತನ್ನ ಅತ್ತಿಗೆ ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ. ಈವೇಳೆ ತೀವ್ರವಾಗಿ ಗಾಯಗೊಂಡ ತೇಜಸ್ವಿನಿಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬ್ಯಾಟರಾಯನಹಳ್ಳಿ ಗ್ರಾಮದ ತಿಪ್ಪಣ್ಣ ಎಂಬುವರಿಗೆ ನಾಲ್ಕು ಜನ ಮಕ್ಕಳು ಆಪೈಕಿ ಮೂರು ಗಂಡು ಮಕ್ಕಳು ಒಂದು ಹೆಣ್ಣು ಮಗಳು. ಈ ಪೈಕಿ ಮುರಳಿ ತಿಪ್ಪಣ್ಣನ ದೊಡ್ಡ ಮಗ, ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದ ಮುರಳಿಗೆ ಎರಡು ಮದುವೆಯಾಗಿದ್ದ,ಇಬ್ಬರು ಪತ್ನಿಯರನ್ನು ನೋಡಿಕೊಂಡಿದ್ದ ಅವನ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.
ಮೊದಲ ಪತ್ನಿ ಬೇತಮಂಗಲದಲ್ಲಿ ವಾಸವಿದ್ರೆ, ಎರಡನೇ ಪತ್ನಿ ಕೊತ್ತೂರು ಗ್ರಾಮದಲ್ಲಿ ವಾಸವಿದ್ರು. ಆದರೆ ಇತ್ತೀಚೆಗೆ ಮುರಳಿ ತನ್ನ ತಂದೆಯ ಬಳಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದ. ಈ ವಿಚಾರ ಮುರಳಿ ತಮ್ಮ ಚಲಪತಿಯ ಕಣ್ಣು ಕೆಂಪಗಾಗಿಸಿತ್ತು, ಅಲ್ಲದೆ ಇವನು ಎರಡನೇ ಮದುವೆ ಮಾಡಿಕೊಂಡದ್ದ ವಿಚಾರಕ್ಕೂ ಚಲಪತಿಗೆ ಕೋಪವಿತ್ತು.
ಆ ಕಾರಣಕ್ಕೆ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆಗಳು ನಡೆದಿದ್ದವು, ಆದರೆ ಕಳೆದ ರಾತ್ರಿ ಅದೇನಾಯ್ತೋ ಏನೋ ಏಕಾಏಕಿ ಚಲಪತಿ ತನ್ನ ಸ್ನೇಹಿತರಾದ ಶ್ರೀನಿವಾಸ್, ರಂಜಿತ್, ದಿನೇಶ್ ರೊಂದಿಗೆ ಮುರಳಿಯ ಕೊತ್ತೂರು ಮನೆಗೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಮುರಳಿಯನ್ನು ಮನೆಗೆ ಬಾ ಎಂದು ಕರೆದಿದ್ದಾರೆ, ನಾನು ಬರೋದಿಲ್ಲ ಎಂದು ಹೇಳಿ ಮುರಳಿ ಬಾಗಿಲು ಹಾಕಿಕೊಂಡು ಹೊಗಿದ್ದಾರೆ. ಈ ವೇಳೆ ಮತ್ತೆ ಬಂದು ಬಾಗಿಲು ತಟ್ಟಿದ್ದಾರೆ, ಆಗ ಮುರಳಿ ಎರಡನೇ ಪತ್ನಿ ತೇಜಸ್ವಿನಿ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಚಲಪತಿ ಹಾಗೂ ಜೊತೆಯಲ್ಲಿದ್ದವರು ಹಿಂದೆ ಮುಂದೆ ನೋಡದೆ ಚಾಕುವಿನಿಂದ ಇರಿದಿದ್ದಾರೆ.
ಒಳಗೆ ಇದ್ದ ಮುರಳಿ ಏನಾಯ್ತು ಎಂದು ಬಂದು ನೋಡುವಷ್ಟರಲ್ಲಿ ಅಲ್ಲಿದ್ದವರು ಪರಾರಿಯಾಗಿದ್ದಾರೆ. ಕೂಡಲೇ ತೇಜಸ್ವಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದ್ರು ಅಷ್ಟರಲ್ಲಿ ತೇಜಸ್ವಿನಿ ಮೃತಪಟ್ಟಿದ್ದಾಳೆ. ಸದ್ಯ ಬೇತಮಂಗಲ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ, ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ