ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಹುಟ್ಟು ಹಬ್ಬಕ್ಕೆ ಐಪಿಎಲ್ ಫ್ರಾಂಚೈಸಿ ‘ಮುಂಬೈ ಇಂಡಿಯನ್ಸ್’ ಶುಭ ಕೋರಿದೆ. ಈ ನಡುವೆ ಫ್ರಾಂಚೈಸಿ ವಿರುದ್ಧ ರೋಹಿತ್ ಅಭಿಮಾನಿಗಳು ಕಿಡಿಕಾರಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವು ಐದು ಸಲ ಪ್ರಶಸ್ತಿ ಜಯಿಸಿದಾಗಲೂ ಅವರನ್ನು ಕೆಳಗಿಳಿಸಲಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ಪೋಸ್ಟ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.
ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನೂ ಟ್ರೇಡ್ನಲ್ಲಿ ಮುಂಬೈ ತಂಡವು ಸೇರ್ಪಡೆ ಮಾಡಿಕೊಂಡಿತ್ತು.
‘ನಾಯಕತ್ವದ ಬದಲಾವಣೆಯು ನಮ್ಮ ಫ್ರಾಂಚೈಸಿಯ ಭವಿಷ್ಯದ ಕ್ರಮವಾಗಿದೆ. ರೋಹಿತ್ ಅವರ ಅತ್ಯದ್ಭುತವಾದ ನಾಯಕತ್ವ ಮತ್ತು ನೀಡಿರುವ ಸೇವೆಗೆ ಆಭಾರಿಯಾಗಿದ್ದೇವೆ. ಮುಂಬೈ ತಂಡಕ್ಕೆ ಮೊದಲಿನಿಂದಲೂ ಖ್ಯಾತನಾಮ ಆಟಗಾರರ ನಾಯಕತ್ವ ಲಭಿಸಿರುವುದು ಸೌಭಾಗ್ಯವೇ ಸರಿ. ಸಚಿನ್ ತೆಂಡೂಲ್ಕರ್, ಹರಭಜನ್ ಸಿಂಗ್, ರಿಕಿ ಪಾಂಟಿಂಗ್ ಮತ್ತು ರೋಹಿತ್ ಅವರು ತಂಡವನ್ನು ಬಲಿಷ್ಠಗೊಳಿಸಿದ್ದಾರೆ’ ಎಂದು ಫ್ರಾಂಚೈಸಿಯು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿತ್ತು ಎನ್ನಲಾಗಿದೆ.