ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ ಡಿ. 26ರಿಂದ ನೋಂದಣಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವ ಡಾ. ಶರಣಪ್ರಕಾಶ್ ಹೇಳಿದ್ದಾರೆ.
ಹೌದು,ಯುವನಿಧಿಯ ಹಣ ಜ. 12ರಂದು ಖಾತೆಗೆ ನೇರವಾಗಿ ಜಮೆಯಾಗಲಿದೆ.ಆದರೆ, ಒಂದು ವೇಳೆ ಉದ್ಯೋಗ ಸಿಕ್ಕ ಮೇಲೆಯೂ ಇಲ್ಲವೇ ಉದ್ಯೋಗದಲ್ಲಿದ್ದೂ ಅರ್ಜಿ ಹಾಕಿ ಹಣ ಪಡೆದಿದ್ದು ಸಾಬೀತಾದರೆ ಅಂಥವರ ಮೇಲೆ ಕಾನೂನು ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಅಲ್ಲದೆ, ಅವರು ಪಡೆದ ಅಷ್ಟೂ ಹಣವನ್ನು ವಾಪಸ್ ಪಡೆಯಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಯೋಗಿ ಸಚಿವ ಡಾ. ಶರಣಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಯುವ ನಿಧಿ ಯೋಜನೆಯ ದುರುಪಯೋಗದ ಬಗ್ಗೆ ಸರ್ಕಾರ ಕ್ರಮವಹಿಸಬೇಕಿದೆ. ಯುವನಿಧಿ ದುರುಪಯೋಗ ತಡೆಯುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ
ಜನವರಿ 12ರಂದು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದ್ದು, ಅಂದು ಶಿವಮೊಗ್ಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದೇವೆ. ಕೆಲಸ ಸಿಗದಿರುವ ಬಗ್ಗೆ ಫಲಾನುಭವಿ ಸ್ವಯಂ ಧೃಢೀಕರಣ ಮಾಡಿಕೊಳ್ಳಬೇಕು. ಈ ನಡುವೆ ಕೆಲಸ ಸಿಕ್ಕರೆ ಅವರಿಗೆ ನಿಧಿ ಹಣ ಸಿಗುವುದಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.