ಕನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅರೆಸ್ಟ್ (Arrest) ಆಗಿದ್ದಾರೆ. ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ವಿನೋವಾ ರಸ್ತೆಯಲ್ಲಿ ವಿಜಯ್ ಕಂಡು ಬಹುತೇಕರು ಗಾಬರಿಗೊಂಡಿದ್ದರು. ವಿಜಯ್ ಮೈ ತುಂಬಾ ರಕ್ತ ಬೇರೆ ಹರಿದಿದ್ದರಿಂದ ಏನಾಯಿತು ಎಂದೆಲ್ಲ ವಿಚಾರಿಸಿದ್ದರು. ಆಮೇಲೆ ಅದು ಶೂಟಿಂಗ್ ಸನ್ನಿವೇಶ ಎಂದು ಗೊತ್ತಾಗಿ ನಿಟ್ಟುಸಿರಿಟ್ಟರು.
ಹೌದು, ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ (Bhima) ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಜಯ್ ಶೂಟ್ ಮಾಡುತ್ತಿದ್ದಾರೆ. ನಡು ರಸ್ತೆಯಲ್ಲಿ ವಿಜಯ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವ ದೃಶ್ಯ ಅದಾಗಿದೆ. ಈ ಮೂಲಕ ಭೀಮ ಸಿನಿಮಾದ ಕ್ಲೈಮ್ಯಾಕ್ಸ್ ಏನಾಗಿರಲಿದೆ ಎನ್ನುವ ಸಣ್ಣದೊಂದು ಸುಳಿವೂ ಸಿಕ್ಕಿದೆ.
ದುನಿಯಾ ವಿಜಯ್ (Duniya Vijay) ಈಗಾಗಲೇ ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಭೀಮನಾಗಿ ಅಬ್ಬರಿಸಲು ಸಜ್ಜಾಗಿರುವ ಬೆನ್ನಲ್ಲೇ ಫ್ಯಾನ್ಸ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಸಿನಿ ದುನಿಯಾಗೆ ಇಬ್ಬರು ಪುತ್ರಿಯರನ್ನು ವಿಜಯ್ ಪರಿಚಯಿಸುತ್ತಿದ್ದಾರೆ.