ಬೆಂಗಳೂರು: 24 ಲಕ್ಷ ರೂ. ಮೌಲ್ಯದ ಬೈಕ್ ಕಾರಿಗೆ ಡಿಕ್ಕಿ ಹೊಡೆದ (Bike Accident) ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ತಡರಾತ್ರಿ ನಡೆದಿದೆ.
ಜಯನಗರದ (Jayanagara) ಅಶೋಕ ಪಿಲ್ಲರ್ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ಶೇಕ್ ನಾಸಿರ್ (32) ಸಾವನ್ನಪ್ಪಿದ್ದಾರೆ. ಹಿಂಬದಿ ಬೈಕ್ ಸವಾರ ಸೈಯದ್ ಮುದಾಸಿರ್ ಗಾಯಗೊಂಡಿದ್ದಾರೆ.
ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಆರ್ಆರ್ 1000 ಸಿಸಿ (BMW RR 1000CC Bike) ಚಲಾಯಿಸುತ್ತಿದ್ದರು. ವ್ಹೀಲಿಂಗ್ ಮಾಡುತ್ತಾ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶೇಕ್ ನಾಸಿರ್ ಎಂಬ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಬೈಕ್ ಸವಾರರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.