ಗದಗ: ಮನುಷ್ಯನಲ್ಲಿರುವ ಅಜ್ಞಾನ ಎಂಬ ಕಗ್ಗತ್ತಲೆ ಹೊಡೆದೋಡಿಸಲು ಸುಜ್ಞಾನವೆಂಬ ದೀಪ ಹಚ್ಚಬೇಕು. ಅದಕ್ಕೆ ಗುರು ಉಪದೇಶ ಅತ್ಯಂತ ಅವಶ್ಯವಾಗಿ ಬೇಕೆಂದು ಹಿರಿಯ ಸಾಹಿತಿ ಐ. ಕೆ. ಕಮ್ಮಾರ ಹೇಳಿದರು.
ಅವರು ದಕ್ಷಿಣ ಕಾಶಿ ಖ್ಯಾತಿಯ ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಬೆಟ್ಟದ ಮೇಲೆ ವಿರಾಜಮಾನವಾಗಿರುವ ಪಂಚಲಿಂಗೇಶ್ವರ ದೇವರ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಸಿದ್ಧಿ ಪುರುಷರಾಗಿದ್ದ ಮಣಕವಾಡದ ಲಿಂ. ಮೃತ್ಯುಂಜಯ ಶರಣರು ಈ ಪಂಚಲಿಂಗೇಶ್ವರ ದೇವರ ಬಗ್ಗೆ ಕೊಂಡಾಡಿ ಜಾಗೃತ ಸ್ಥಳವನ್ನಾಗಿ ಮಾಡಿದ್ದಾರೆ. ಅಲ್ಲದೆ ಹಿರೇಹಂದಿಗೋಳ ಗ್ರಾಮದೊಂದಿಗೆ ಬಾಂಧವ್ಯ ಹೊಂದಿದ್ದರು. ಹೀಗಾಗಿ ಲಿಂ. ಮಣಕವಾಡ ಶ್ರೀಗಳವರ ಪಾದ ಸ್ಪರ್ಶದಿಂದ ಹಿರೇಹಂದಿಗೋಳ ಪಾವನವಾಗಿದೆ ಎಂದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ವಿದ್ಯಾ ಬುದ್ಧಿ ಕೊಟ್ಟರೆ ಅವರ ಬದುಕು ಬಂಗಾರವಾಗುವುದು ಎಂದು ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರಲ್ಲಿ ಅದರಲ್ಲೂ, ವಿಶೇಷವಾಗಿ ತಾಯಂದಿರಲ್ಲಿ ಪ್ರಾರ್ಥಿಸಿಕೊಂಡರು.
ನಿವೃತ್ತ ಉಪ ತಹಶೀಲ್ದಾರರಾಗಿದ್ದ ಗ್ರಾಮದ ವೇ.ಮೂ. ಶಿವಪುತ್ರಯ್ಯ ಯಲಬುರ್ಗಿಮಠ ಅವರು ದೀಪೋತ್ಸವ ಕಾರ್ಯಕ್ರಮಕ್ಕೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು
ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಪಂಚಲಿಂಗೇಶ್ವರ ದೇವರಿಗೆ ವೇದಮೂರ್ತಿ ಶಿವಪುತ್ರಯ್ಯ ಯಲಬುರ್ಗಿಮಠ ಅವರಿಂದ ಮಹಾ ರುದ್ರಾಭಿಷೇಕ ಜರುಗಿತು. ನಂತರ ದೇವಸ್ಥಾನದ ಅರ್ಚಕ ಶಿವಪ್ಪ ಹೂಗಾರ ಅವರಿಂದ ವಿಶೇಷ ಪೂಜೆ ಅಲಂಕಾರ ಜರುಗಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ರೋಣದ ಕುಮಾರಿ ಸಿಂಚನಾ ನಂದಿಕೋಲಮಠ ಅವರ ಸುಮಧುರ ಕಂಠದಿಂದ ಪ್ರಾರ್ಥನೆ ಗೀತೆ ಜರುಗಿತು. ಆಧ್ಯಾತ್ಮಿಕ ಜೀವಿ, ಸಮಾಜ ಸೇವಾ ಕಾರ್ಯಕರ್ತ ಶಿವಶಂಕ್ರಪ್ಪ ಡಿ. ಆರಟ್ಟಿ ಸರ್ವರನ್ನು ಸ್ವಾಗತಿಸಿದರೆ, ಚುಟುಕು ಕವಿ ಮುತ್ತಣ್ಣ ಹೂಗಾರ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು. ಮಹಾ ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲವಾಯಿತು. ನಂತರ ಅಹೋರಾತ್ರಿ ಗ್ರಾಮದ ಪಂಚಲಿಂಗೇಶ್ವರ ಭಜನಾ ಸಂಘದವರಿಂದ ಭಕ್ತಿ ಪ್ರಧಾನವಾದ ಭಜನಾ ಪದಗಳು ಜರುಗಿದವು.