ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan lal Sharma) ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಸಿಎಂ ಅವರು ಜೈಪುರದಿಂದ ಭರತ್ ಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಚರಂಡಿಗೆ ಜಾರಿದ್ದರಿಂದ ಮುಖ್ಯಮಂತ್ರಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ಬಳಿಕ ಭಜನ್ ಲಾಲ್ ಶರ್ಮಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿದೆ.
ಭಜನ್ ಲಾಲ್ ಅವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರು ಭರತ್ ಪುರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.
ಡಿಸೆಂಬರ್ 12 ರಂದು ಬಿಜೆಪಿಯು (BJP) ಭಜನ್ ಲಾಲ್ ಶರ್ಮಾ ಅವರನ್ನು ಸಿಎಂ ಹುದ್ದೆಗೆ ಅಚಚರಿಯ ಆಯ್ಕೆ ಮಾಡಿತ್ತು. ಭರತ್ ಪುರ ಜಿಲ್ಲೆಯ ಶರ್ಮಾ ಅವರು ಜೈಪುರದ ಸಂಗನೇರ್ ಕ್ಷೇತ್ರದಲ್ಲಿ 48,081 ಮತಗಳ ಅಂತರದಿಂದ ಗೆದ್ದಿದ್ದಾರೆ. ಚೊಚ್ಚಲ ಶಾಸಕರಾದ ಭಜನ್ ಲಾಲ್ ಶರ್ಮಾ ಅವರು ಕಳೆದ ಶುಕ್ರವಾರವಷ್ಟೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.