ಹುಬ್ಬಳ್ಳಿ: ‘ವೀರಶೈವ ಲಿಂಗಾಯತ ಸಮಾಜ ಸಂಘಟಿತವಾಗಬೇಕಿದೆ. ಮುಖಂಡರು ವೈಯಕ್ತಿಕ ಹಿತಾಸಕ್ತಿ ಮರೆತು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಘಟಕದಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ದಾವಣಗೆರೆಯಲ್ಲಿ ನಡೆಯಲಿರುವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧಿವೇಶನದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಸಂಘಟನೆ, ಒಗ್ಗಟ್ಟು, ಐಕ್ಯತೆ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ದಾವಣಗೆರೆಯಲ್ಲಿ ನಡೆಯಲಿರುವ ಮಹಾಸಭೆಯಲ್ಲಿ ಸಮಾಜದ ಎಲ್ಲರೂ ಭಾಗವಹಿಸುವ ಮೂಲಕ ಲಿಂಗಾಯತ ಸಮಾಜ ಸಂಘಟಿತವಾಗಿದೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಬೇಕು. ಸಮಾಜದ ಏಳಿಗೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೇವೆ ಶ್ಲಾಘನೀಯ’ ಎಂದರು.
ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ಲಿಂಗಾಯತ ಸಮಾಜದ ಜನರಿದ್ದಾರೆ. ಆದರೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮೀಸಲಾತಿಗಾಗಿ ಹಲವು ಬಾರಿ ಹೋರಾಟ ನಡೆಸಿದರೂ ಈವರೆಗೂ ಮಾನ್ಯತೆ ದೊರೆತಿಲ್ಲ. ಸರ್ಕಾರವು ಒಡೆದು ಆಳುವ ನೀತಿ ಅನುಸರಿಸುತ್ತಿದ್ದು, ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಒಗ್ಗಟ್ಟಿನ ಕೊರತೆ, ರಾಜಕಾರಣಿಗಳ ಹಸ್ತಕ್ಷೇಪದಿಂದ ಸಮಾಜ ಹಿಂದುಳಿದಿದೆ ಎಂದರು.
ಡಿ.23, 24ರಂದು ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಅಧಿವೇಶನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾಜವನ್ನು ಸಂಘಟಿಸಲು ಮಹಾಸಭೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಶೇಖರ ಡಂಗನವರ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ದೇವರಾಜ ದಾಡಿಬಾವಿ, ಮುಖಂಡರಾದ ಬಸವಕುಮಾರ ತಲವಾಯಿ,ವಿಕಾಸ ಸೊಪ್ಪಿನ, ಸಿದ್ದಣ್ಣ ಹಂಡೇದ, ದುಂಡಪ್ಪ ಶೆಟ್ಟರ್ ಇತರರು ಇದ್ದರು.
ಪದಾಧಿಕಾರಿಗಳ ಆಯ್ಕೆ:
ಹಣಮಂತಪ್ಪ ಹರ್ತಿ (ಪ್ರಧಾನ ಕಾರ್ಯದರ್ಶಿ), ವಿನೋದಗೌಡ ಪಾಟೀಲ, ಮಂಜುನಾಥ ಹಳ್ಯಾಳ, ರವಿರಾಜ ಕೂಡ್ಲಿ (ಉಪಾಧ್ಯಕ್ಷರು), ಬಸಪ್ಪ ಕಾರಿಕಾರಿ (ಕೋಶಾಧ್ಯಕ್ಷ), ಗುರುರಾಜ ಹೂಗಾರ (ಮಾಧ್ಯಮ ವಕ್ತಾರ), ಮೃತ್ಯುಂಜಯ ಮಟ್ಟಿ (ಸಂಚಾಲಕ), ಗಂಗಾಧರ ಗುಜಮಾಗಡಿ (ಸಂಚಾಲಕ ಕಾರ್ಯದರ್ಶಿ), ವೀರೇಶ ಕೆಸರಪ್ಪನವರಮ ರಾಯನಗೌಡ ಶೆಟ್ಟನಗೌಡ್ರ (ಕಾರ್ಯದರ್ಶಿ), ಸಿದ್ದಲಿಂಗೇಶ ಟೆಂಗಿನಕಾಯಿ, ಬಸವರಾಜ ಹಿತ್ತಲಮನಿ, ಈರಣ್ಣ ಶಿರಟ್ಟಿಮಠ ಅವರನ್ನು ಕಾರ್ಯಕಾರಣಿಯಾಗಿ ಆಯ್ಕೆ ಮಾಡಲಾಗಿದೆ.