ಚಿತ್ರದುರ್ಗ:- ಸಿಎಂ ಸಿದ್ದರಾಮಯ್ಯ ಒಬ್ಬ ಮೋಸಗಾರ, ದಲಿತರ ಪರವಾಗಿಲ್ಲ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹಾಗೂ ಆರ್ಎಸ್ಎಸ್ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಕೆಲವರು ಒಳಮೀಸಲಾತಿ ಬಗ್ಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡಾ ತಪ್ಪು ತಿಳುವಳಿಕೆ ಮೂಡಿಸುತ್ತಿದೆ ಎಂದರು.
ಬಲಾಢ್ಯರ ನಡುವೆ ಶೋಷಿತರು ಮೀಸಲಾತಿ ಪಡೆಯುವುದು ಕಷ್ಟ. ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ರಚಿಸಿ ಅನುದಾನ, ಸಿಬ್ಬಂದಿ ಕೊಡಲಿಲ್ಲ.
ನಾಲ್ಕುವರೆ ವರ್ಷಗಳ ಕಾಲ ರಾಜ್ಯದಲ್ಲಿ ಸುತ್ತಾಡಿ ವರದಿ ನೀಡಲಾಯಿತು. 2013ರಲ್ಲಿ ಚುನಾವಣೆ ಎದುರಾದಾಗ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷಗಳ ಕಾಲ ತಿರುಗಿ ನೋಡಲಿಲ್ಲ. ಇನ್ನಾದರೂ ಪರಿಶಿಷ್ಟ ಜಾತಿ ಜನಾಂಗ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು. ಸದಾಶಿವ ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಯಲ್ಲಿನ 101 ಒಳಜಾತಿಗಳಲ್ಲಿ ಯಾರನ್ನು ತೆಗೆದು ಹಾಕುವುದಿಲ್ಲ. ಜನಸಂಖ್ಯೆ ಗನುಗುಣವಾಗಿ ಆಯಾ ಜಾತಿಗೆ ಸಿಗಬೇಕಾದ ಮೀಸಲಾತಿ ದೊರಕಲಿ. ನಮ್ಮದೇನು ಅಭ್ಯಂತರವಿಲ್ಲ.
ಭೋವಿ, ಲಂಬಾಣಿ ಜನಾಂಗದವರಲ್ಲಿ ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಲಿತರನ್ನು ವಂಚಿಸುತ್ತಲೆ ಬರುತ್ತಿದೆ ಎಂದರು. ಉಚಿತವಾಗಿ ಅಕ್ಕಿ, ರಾಗಿ, ಎರಡು ಸಾವಿರ ರು. ಆಸೆಯಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಬಲಿಯಾಗಬೇಡಿ. ಎಸ್ಸಿಪಿ. ಟಿಎಸ್ಪಿ. ಹಣವನ್ನು ಐದು ಉಚಿತ ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಜ.17ರಂದು ಸುಪ್ರೀಂಕೋರ್ಟ್ನಲ್ಲಿ ಏಳು ಸದಸ್ಯರುಳ್ಳ ಬೆಂಚ್ಗೆ ಮೀಸಲಾತಿ ಕೇಸ್ ಬರಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದರು.