ಪೀಣ್ಯ ದಾಸರಹಳ್ಳಿ:- ನಾಗಸಂದ್ರ ಮೆಟ್ರೊ ಸ್ಟೇಷನ್ ಬಳಿಯ ರಸ್ತೆಯು ದಿಢೀರ್ ಕುಸಿತಗೊಂಡಿದ್ದು, ಕಳಪೆ ಕಾಮಗಾರಿಗೆ ಮತ್ತೊಂದು ನಿದರ್ಶನವಾಗಿದೆ.
ಐದು ದಿನಗಳ ಹಿಂದೆ ಭಾರಿ ವಾಹನವೊಂದು ಈ ದಾರಿಯಲ್ಲಿ ಚಲಿಸಿದ ಮೇಲೆ ರಸ್ತೆ ಕುಸಿದಿದೆ. ಡಾಂಬರು ಸಹಿತ ಕುಸಿದಿದೆ. ಇವತ್ತಿನವರೆಗೂ ಅದನ್ನು ದುರಸ್ತಿ ಮಾಡಿಲ್ಲ. ಬದಲಿಗೆ, ಗುಂಡಿಯ ಸುತ್ತ, ಕಲ್ಲು ಇಟ್ಟು, ದಾರ ಕಟ್ಟಲಾಗಿದೆ. ಇದರಿಂದ ಮೆಟ್ರೊ ರೈಲು ನಿಲ್ದಾಣಕ್ಕೆ ಬಂದು ಹೋಗುವವರಿಗೆ ತುಂಬಾ ತೊಂದರೆಯಾಗುತ್ತಿದೆ.
‘ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಈ ಭಾಗದಲ್ಲಿ ಗುಂಡಿ ತೆಗೆದಿದ್ದು, ಕಾಮಗಾರಿ ಮುಗಿದ ಮೇಲೆ ಸಮರ್ಪಕವಾಗಿ ಮುಚ್ಚಿ ರಸ್ತೆ ಮಾಡದ ಕಾರಣ, ಹೀಗೆ ಗುಂಡಿ ಬಿದ್ದಿದದೆ. ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ಗುಂಡಿ ಮುಚ್ಚದೇ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಮೆಟ್ರೊ ನಿಲ್ದಾಣದ ಮುಂಭಾಗದಲ್ಲಿ ನೀರಿನ ಪೈಪ್ ಒಡೆದಿತ್ತು. ಅದನ್ನು ಸರಿಪಡಿಸಿದ್ದೇವೆ. ಪೈಪ್ ಅನ್ನು ಇನ್ನೊಂದು ಕಡೆಗೆ ನೇರ ಸಂಪರ್ಕ ಕಲ್ಪಿಸಬೇಕು. ಅದಕ್ಕಾಗಿ ಹಾಗೆ ಬಿಟ್ಟಿದ್ದೇವೆ. ಶೀಘ್ರವೇ ಗುಂಡಿಯನ್ನು ಮುಚ್ಚಿ ಸರಿಪಡಿಸುತ್ತೇವೆ’ ಎಂದು ಜಲಮಂಡಳಿ ಎಂಜಿನಿಯರ್ ನಾಗರಾಜ್ ಹೇಳಿದ್ದಾರೆ.