ಬೆಂಗಳೂರು:- ಪ್ರತಾಪ್ ಸಿಂಹರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಪ್ರತಿಪಕ್ಷಗಳ 141 ಸಂಸದರನ್ನು ಅಮಾನತು ಮಾಡಿರುವುದು ನಿಜಕ್ಕೂ ಖಂಡನೀಯ. ಭಾರತೀಯ ಸಂಸತ್ ವ್ಯವಸ್ಥೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಸದರನ್ನು ಅಮಾನತು ಮಾಡಿರುವುದು ಇದೇ ಮೊದಲು ಎಂದಿದ್ದಾರೆ.
ಸಂಸತ್ ಭವನದ ರಕ್ಷಣಾ ವೈಫಲ್ಯದ ಬಗ್ಗೆ ಉತ್ತರ ಕೊಡುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ನ್ಯಾಯಯುತವಾಗಿ ಸಂಸತ್ ಕಲಾಪದಲ್ಲಿ ಆಗ್ರಹಿಸಿವೆ. ಆದರೆ, ಪ್ರತಿಪಕ್ಷಗಳ ಮಾತಿಗೆ ಕೇಂದ್ರ ಸರ್ಕಾರವು ಮನ್ನಣೆ ನೀಡದೆ ಹಿಟ್ಲರ್ ಧೋರಣೆ ತಾಳಿದೆ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಭುತ್ವದ ಪರಮೋಚ್ಛ ವೇದಿಕೆಯಾಗಿರುವ ಸಂಸತ್ತಿನ ಮೇಲಿನ ದಾಳಿಯ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಅವರು ಆಗ್ರಹಿಸಿರುವ ಅವರು ಸಂಸತ್ ಮೇಲಿನ ದಾಳಿಯ ಭದ್ರತಾ ವೈಫಲ್ಯಕ್ಕೆ ಉತ್ತರ ಕೊಡಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.