ಹುಬ್ಬಳ್ಳಿ:– ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಯೋಜನೆಯಲ್ಲಿ ಕಮಿಷನ್ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ ಎಂದು ಅನಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ರಾಜ್ಯದಲ್ಲಿ ಸರ್ಕಾರ ಬಂದು 6 ತಿಂಗಳು ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತಿದ್ದಾರೆ. ಇವರು ಅಧಿಕಾರಕ್ಕೆ ಬರುವ ಮುನ್ನ ನೀಡಿರುವ ಭರವಸೆ ಈಡೇರಿಸಿಲ್ಲ. ಅವರೇ ಮಧ್ಯಂತರ ಆರ್ಥಿಕ ಸ್ಥಿತಿಗತಿ ಕುರಿತು ವರದಿ ಮಂಡನೆ ಮಾಡಿದರು. ಆದರೆ, ಅದರಿಂದ ಏನು ಸುಧಾರಣೆ ಆಗಿಲ್ಲ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.
ಪ್ರತಿ ವರ್ಷ ಬಂಡವಾಳ ವೆಚ್ಚ ಹೆಚ್ಚಾಗುತ್ತಾ ಹೋಗಬೇಕು. ಆದರೆ, ಈ ವರ್ಷ ಕಡಿಮೆಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತೆಗೆದುಕೊಂಡು ಹೋಗಿದ್ದಾರೆ. ಎಷ್ಟೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಲಿ, ಅದಕ್ಕೆ ತಕ್ಕಂತೆ ಆದಾಯ ಸಂಗ್ರಹ ಮಾಡಬೇಕು. ಗ್ಯಾರಂಟಿ ಹೆಸರಲ್ಲಿ ಜನರ ಮೇಲೆ ಹೊರೆ ಹಾಕಿರುವುದನ್ನು ಕಡಿಮೆ ಮಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಿ ಎಂದು ಸಲಹೆ ನೀಡಿದ್ದಾರೆ.