ಬೆಂಗಳೂರು:- ಕಾಂಗ್ರೆಸ್ ಗೂಂಡಾಗಿರಿ ಮುಂದುವರಿದರೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಿನ್ನೆ ಚಿತ್ರದುರ್ಗದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ಮಾಡುವಾಗ ಕೆಲವು ಕಾಂಗ್ರೆಸ್ ಗೂಂಡಾಗಳು ಬಂದು ಅವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ. ಜೊತೆಗೆ ಅವರ ಪತ್ರಿಕಾಗೋಷ್ಠಿಗೆ ತೊಂದರೆಯನ್ನುಂಟು ಮಾಡಿ ಅವರ ಮೇಲೆ ಎರಗಿದ್ದು ಖಂಡನೀಯ ಎಂದರು.
ಕಾರಜೋಳ ಅವರು ಪಕ್ಷದ ಪರವಾಗಿ ಅನೇಕ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರಿಗಾಗಿ ಮೀಸಲಿಟ್ಟ ಎಸ್ಸಿಎಸ್ಪಿಎಸ್ಟಿಪಿ 11 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವುದನ್ನು ನಮ್ಮ ಪಕ್ಷ ಮೊದಲಿನಿಂದಲೂ ಖಂಡಿಸುತ್ತಿದೆ ಹಾಗೂ ವಿರೋಧಿಸುತ್ತಿದೆ. ಇದೇ ವಿಚಾರವನ್ನು ಬಳಸಿ, ನಾನು, ಕಾರಜೋಳ, ರಾಜೀವ್, ಎನ್.ಮಹೇಶ್ ಹೀಗೆ ಅನೇಕ ಮುಖಂಡರು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಆಂದೋಲನ ಶುರು ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ದಲಿತರಿಗೆ ದೋಖಾ ಮಾಡಿದೆ, ಅನ್ಯಾಯ ಮಾಡುತ್ತಿದೆ. ಮೋಸ, ವಂಚನೆ ಮಾಡುವ ಕುರಿತು ನಮ್ಮ ಸಮುದಾಯದ ಅಂದರೆ ಪರಿಶಿಷ್ಟ ಜಾತಿ, ವರ್ಗಗಳ ಜನರಿಗೆ ತಿಳಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಕಾರಜೋಳರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ಗೂಂಡಾ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. 11 ಸಾವಿರ ಕೋಟಿ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೆ ಅದಕ್ಕೂ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು.