ದೊಡ್ಡಬಳ್ಳಾಪುರ: ಮಾಧ್ಯಮ ಬಳಗ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ RDPR ದೊಡ್ಡಬಳ್ಳಾಪುರ ವತಿಯಿಂದ ನಡೆದ ಸೌಹಾರ್ದ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ರಣರೋಚಕ ಫೈನಲ್ ಪಂದ್ಯದಲ್ಲಿ ಪೊಲೀಸ್ ಇಲಾಖೆ ಕಡೆಯ ಓವರ್ ನಲ್ಲಿ ಆರ್ ಡಿಪಿಆರ್ ಎದುರು ವಿಜಯ ಸಾಧಿಸಿ 2023-24ನೇ ಸಾಲಿನ ಸೌಹಾರ್ದ ಕ್ರಿಕೆಟ್ ಕಪ್ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ(RDPR) ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕಂದಾಯ ಇಲಾಖೆ ತಂಡ ಹಾಗೂ ಮಾಧ್ಯಮ ಬಳಗ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು. ಮಾಧ್ಯಮ ಬಳಗ ಹಾಗೂ ಪೊಲೀಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಾಧ್ಯಮ ತಂಡ ಪರಾಭವಗೊಂಡಿತು.
ಪೊಲೀಸ್ ತಂಡದ ಆಟಗಾರ ಶಿವಾನಂದ್ ಅವರ ಅದ್ಭುತ ಬ್ಯಾಟಿಂಗ್ ಫಲವಾಗಿ ಪೊಲೀಸ್ ಇಲಾಖೆ ವಿಜಯ ಸಾಧಿಸಿತು. ದ್ವಿತೀಯ ಪಂದ್ಯ ಕಂದಾಯ ಇಲಾಖೆ ಹಾಗೂ ಆರ್ ಡಿಪಿಆರ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್ ಡಿಪಿಆರ್ ವಿಜಯ ಸಾಧಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪೈಫೋಟಿಯಲ್ಲಿ ಕಂದಾಯ ಇಲಾಖೆಯ ಆಟಗಾರರು ಮಾಧ್ಯಮ ಬಳಗಕ್ಕೆ ಸೋಲುಣಿಸಿದರು.
ಟೂರ್ನಿಯ ಆರಂಭಕ್ಕೂ ಮುನ್ನ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಡಿವೈಎಸ್ಪಿ ರವಿ ಪಿ., ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾ.ಪಂ.ಇಒ ಮುನಿರಾಜು, ವಕೀಲ ಪ್ರತಾಪ್ ಸೇರಿದಂತೆ ಹಲವು ಗಣ್ಯರು ಪಂದ್ಯಾವಳಿಗೆ ಚಾಲನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಕ್ರೀಡಾಂಗಣಕ್ಕೆ ಆಗಮಿಸಿ ಎಲ್ಲ ತಂಡದ ಅಟಗಾರರಿಗೆ ಶುಭ ಹಾರೈಸಿದರು. ವಿಜೇತ ತಂಡಗಳಿಗೆ ಡಿವೈಎಸ್ಪಿ ರವಿ ಪಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಸೌಹಾರ್ದಯುತವಾಗಿ ಕ್ರಿಕೆಟ್ ಸೇರಿದಂತೆ ಇನ್ನಿತರೆ ಚಟುವಟಿಕೆಗಳು ಹೆಚ್ಚು ಅಗತ್ಯವಾಗಿವೆ.
ಆಟಗಳಲ್ಲಿ ಸೋಲು-ಗೆಲುವು ಸಹಜ. ದಿನನಿತ್ಯದ ಕರ್ತವ್ಯದಲ್ಲಿ ರಿಲ್ಯಾಕ್ಸ್ ಇರುವುದಿಲ್ಲ. ಈ ರೀತಯ ಕ್ರೀಡೆಗಳನ್ನು ಆಯೋಜನೆ ಮಾಡುವುದರಿಂದ ಮನಸ್ಸಿಗೆ ಕೊಂಚ ನೆಮ್ಮದಿ ಸಿಗಲಿದೆ. ಜೊತೆಗೆ ಎಲ್ಲರೂ ಒಂದೆಡೆ ಸೇರಿದಾಗ ಪರಸ್ಪರ ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಕ್ರೀಡೆಗಳನ್ನು ಆಯೋಜನೆ ಮಾಡಿದರೆ ಇಲಾಖೆಯ ಸಹಕಾರ ಸದಾ ಇರಲಿದೆ.
ಕ್ರೀಡೆಗಳಿಗೆ ಸಾರ್ವಜನಿಕರನ್ನೂ ಒಳಗೊಂಡಂತೆ ಆಯೋಜನೆ ಮಾಡಿದರೆ ಆಡಳಿತ ವರ್ಗ- ಸಾರ್ವಜನಿಕರ ಮಧ್ಯೆ ಸಂಬಂಧ ವೃದ್ಧಿಸಲಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಮುನಿಕೃಷ್ಣ ನಗರ ಠಾಣೆ ಪಿಐ ಅಮರೇಶ್ ಗೌಡ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಪಿಐ ಎಂ.ಆರ್.ಹರೀಶ್, ಹೊಸಹಳ್ಳಿ ಠಾಣೆ ಪಿಐ ರಾವ್ ಗಣೇಶ್ ಇತರರು ಇದ್ದರು.