ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಲೋಕೇಶ ರಾವ್ ಮತ್ತು ಶಾಂತಿ ಅವರು ಆತ್ಮಹತ್ಯೆಗೂ ಮುನ್ನ, ‘ನಮ್ಮ ಸಾವಿಗೆ ನಾವೇ ಕಾರಣ. ಆಟೊ ಚಾಲಕನ ತಪ್ಪಿಲ್ಲ’ ಎಂದು ಸೆಲ್ಫಿ ವಿಡಿಯೊ ಮಾಡಿದ್ದು, ಘಟನೆಗೆ ಅವರ ಅಕ್ರಮ ಸಂಬಂಧ ಕುಟುಂಬದವರಿಗೆ ತಿಳಿದಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಪೀಣ್ಯ ಎರಡನೇ ಹಂತದ ನಿವಾಸಿಗಳಾದ ಇವರು, ಭಾನುವಾರ ನಗರದ ಆಟೊ ಚಾಲಕ ಮಾರುತಿ ಜಾಧವ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಲೋಕೇಶ ತನ್ನ ಪತ್ನಿ ಪಾರ್ವತಿ ಅವರ ತಂಗಿ ಶಾಂತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಪತ್ನಿಗೆ ತಿಳಿಯುತ್ತಿದ್ದಂತೆ ಹುಬ್ಬಳ್ಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.