ಬೆಂಗಳೂರು:- ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ, ಇನ್ನೂ ನಿಗದಿ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಸೇರಿದಂತೆ ನೀರಾವರಿ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ, ಇನ್ನೂ ನಿಗದಿಯಾಗಿಲ್ಲ’ ಎಂದರು.
ಪ್ರಧಾನಿ ಭೇಟಿಗೆ ಸಿಎಂ ಸಮಯ ಕೇಳಿದ್ದು, ಬರ ಪರಿಹಾರ, ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಹೆಚ್ಚಳ ಸೇರಿದಂತೆ ಇತರೆ ಪ್ರಮುಖ ವಿಚಾರವಾಗಿ ಚರ್ಚೆ ಮಾಡಲಿದ್ದಾರೆ. ಪ್ರಧಾನಿ ಭೇಟಿಗೆ ನನಗೆ ಇನ್ನು ಸಮಯ ನಿಗದಿಯಾಗಿಲ್ಲ. ಹೀಗಾಗಿ ಕೆಲವು ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ’ ಎಂದು ತಿಳಿಸಿದರು.
‘ಇಂದು ಪಕ್ಷದ ನಾಯಕರ ಜತೆ ಸಭೆ ನಡೆಯಲಿದೆ. ಯಾವೆಲ್ಲಾ ವಿಷಯ ಚರ್ಚೆ ಮಾಡುತ್ತೇವೆ ಎಂಬುದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಿಗಮ, ಮಂಡಳಿಗಳಿಗೆ ಮೊದಲು ಶಾಸಕರ ನೇಮಕ ಆಗಲಿದೆ. ಸಾಧ್ಯವಾದರೆ ಕೆಲವು ಕಾರ್ಯಕರ್ತರ ನೇಮಕವನ್ನೂ ಮಾಡುತ್ತೇವೆ. ಒಟ್ಟು ಮೂರು ಹಂತಗಳಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು’ ಎಂದು ಅವರು ತಿಳಿಸಿದರು.
ಡಿ. 28ಕ್ಕೆ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ನಾಗ್ಪುರದಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ 21ರಂದು ದಿಲ್ಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ನಾನು ಕಾರ್ಯಕಾರಿಣಿ ಸಮಿತಿ ಸದಸ್ಯನಲ್ಲ. ನಾನು ಕೇವಲ ಆಹ್ವಾನಿತ ಮಾತ್ರ. ಸಾಮಾನ್ಯವಾಗಿ ಕಾರ್ಯಕಾರಿ ಸಮಿತಿ ಸಭೆ ನಂತರ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆ ಮಾಡುತ್ತಾರೆ. ಕೆಲವೊಮ್ಮೆ ಕಾರ್ಯಕಾರಿ ಸಮಿತಿ ಸಭೆ ಸಮಯದಲ್ಲೇ ಕರೆಯುತ್ತಾರೆʼ ಎಂದು ತಿಳಿಸಿದರು.