ಕೃಷಿ ಜಮೀನಿನ ವಿಸ್ತೀರ್ಣ ದಾಖಲಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗಡುವು ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರೈತರ ಜಮೀನಿನ ವಿಸ್ತೀರ್ಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ಫ್ರೂಟ್ಸ್ನಲ್ಲಿ ದಾಖಲಿಸುವಂತೆ ಎರಡು ತಿಂಗಳ ಹಿಂದೆಯೇ ಸೂಚಿಸಲಾಗಿತ್ತು. ಈವರೆಗೆ ಒಟ್ಟು ವಿಸ್ತೀರ್ಣದ ಶೇಕಡ 70ರಷ್ಟನ್ನೂ ದಾಖಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಗಾಲದಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣವಿದೆ. ಆದರೆ, ಫ್ರೂಟ್ಸ್ನಲ್ಲಿ ಮಾಹಿತಿ ದಾಖಲಿಸದೇ ಇದ್ದರೆ ಅಂತಹ ರೈತರು ಪರಿಹಾರದಿಂದ ವಂಚಿತರಾಗುತ್ತಾರೆ. ಇದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಎಂದರು.
ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಜಮೀನು ವಿಸ್ತೀರ್ಣ ದಾಖಲಿಸುವಲ್ಲಿ ಹೆಚ್ಚು ಪ್ರಗತಿಯಾಗಿಲ್ಲ. ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪು ಕೂಡ ರೈತರು ಪರಿಹಾರದಿಂದ ವಂಚಿತರಾಗಲು ಕಾರಣವಾಗಲಿದೆ. ಆಂದೋಲನದ ಮಾದರಿಯಲ್ಲಿ ಈ ಕೆಲಸ ಮಾಡಬೇಕು. ಹೋಬಳಿವಾರು ಅಧಿಕಾರಿಗಳ ಸಭೆ ನಡೆಸಿ, ಇದೇ ಶುಕ್ರವಾರದೊಳಗೆ ಎಲ್ಲ ರೈತರ ಜಮೀನುಗಳ ವಿಸ್ತೀರ್ಣವನ್ನು ದಾಖಲಿಸಬೇಕು ಎಂದು ತಾಕೀತು ಮಾಡಿದರು.
134 ತಾಲ್ಲೂಕುಗಳಲ್ಲಿ ಈವರೆಗೂ ಬರ ನಿರ್ವಹಣೆ ಕಾರ್ಯಪಡೆ ಸಭೆ ನಡೆದಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನಹರಿಸಬೇಕು. ತ್ವರಿತವಾಗಿ ಸಭೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.