ಐಪಿಎಲ್ ಮಿನಿ ಹರಾಜಿಗೂ ಮುನ್ನ ಐದು ಬಾರಿಯ ಚಾಂಪಿಯನ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಯಿತು ಮತ್ತು ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ತೀವ್ರ ಆಶ್ಚರ್ಯ ಉಂಟುಮಾಡಿತು. ಗುಜರಾತ್ ಟೈಟನ್ಸ್ನಿಂದ ವ್ಯಾಪಾರ ಮಾಡಿಕೊಂಡ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕ ಎಂದು ಘೋಷಿಸಿತು.
ಐದು ಪ್ರಶಸ್ತಿಗಳನ್ನು ಗೆದ್ದುಕೊಟ್ಟ ರೋಹಿತ್ ಶರ್ಮಾರನ್ನು ದಿಢೀರ್ನೆ ನಾಯಕತ್ವದಿಂದ ತೆಗೆದುಹಾಕಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿರುದ್ಧ ಅಪ್ಪಟ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದರ ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಕಳೆದುಕೊಂಡಿದೆ.
ಕೆಲವು ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಜೆರ್ಸಿಯನ್ನು ನಡುರಸ್ತೆಯಲ್ಲಿ ಸುಟ್ಟುಹಾಕುತ್ತಿದ್ದಾರೆ. ಇದೀಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದು ಬೇರೆ ಯಾವುದಾದರೂ ಐಪಿಎಲ್ ಫ್ರಾಂಚೈಸಿ ಪರ ಆಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.
ಈ ಕುರಿತು ಕೆಲವು ಪೋಸ್ಟ್ಗಳು, ಟ್ವೀಟ್ಗಳು, ಮೀಮ್ಸ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಜನಪ್ರಿಯ ಐಪಿಎಲ್ ಫ್ರಾಂಚೈಸಿ ಆರ್ಸಿಬಿ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ ಒಟ್ಟಿಗೆ ಆಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ, ಹಿಟ್ ಮ್ಯಾನ್ ಮತ್ತು ರನ್ ಮಷಿನ್ ಒಂದಾಗಿ ಆಡಿದರೆ, ‘ಈ ಸಲ ಕಪ್ ನಮ್ದೆ’ ಅಂತ ಹೇಳುತ್ತಿದ್ದಾರೆ. ಇದರರ್ಥ ರೋಹಿತ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಮೂಲಕ ಕಳೆದ 15 ವರ್ಷಗಳಿಂದ ಪ್ರಶಸ್ತಿ ಕನಸು ಕಾಣುತ್ತಿರುವ ಆರ್ಸಿಬಿ ಟ್ರೋಫಿ ಬರ ತೀರಿಸಲಿ ಎಂಬುದು ಅಭಿಮಾನಿಗಳ ಬಯಕೆಯಾಗಿದೆ.