ಬೆಂಗಳೂರು:- ಸ್ವಪಕ್ಷದ ನಾಯಕರ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವಿಚಾರದ ಕುರಿತು ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಯತ್ನಾಳ್ ಅವರು ಯಾವ ಪಕ್ಷದಲ್ಲಿದ್ದಾರೆ ಅನ್ನೋ ಅನುಮಾನ ಮೂಡಿಸುತ್ತಿದೆ. ವಿಜಯೇಂದ್ರ ಅವರನ್ನು ರಾಜ್ಯಾದ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಯಡಿಯೂರಪ್ಪ ಅವರಲ್ಲ. ಹೈಕಮಾಂಡ್ ನಾಯಕರು ಆಯ್ಕೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕನಿಗೆ ಸಿಎಂ ಸ್ಥಾನ ಕೊಟ್ಟಿದೆ. ಅಲ್ಲಿನ ಹಿರಿಯ ಘಟಾನುಘಟಿ ನಾಯಕರು, ಮಾಜಿ ಸಿಎಂ ವಸುಂಧರಾ ರಾಜೇ ಅವರು ಅದನ್ನ ಒಪ್ಪಿಕೊಂಡು ಸುಮ್ನೆ ಇದ್ದಾರೆ. ಯತ್ನಾಳ್ ಅವರ ಬದ್ಧತೆ ಯಾರಿಗೆ ಅನ್ನೋದು ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಹೀಗಾಗಿ ಯತ್ನಾಳ್ ಅವರು ಕೂಡ ಪಕ್ಷದ ಹಿತ ದೃಷ್ಟಿಯಿಂದ ಸೈಲೆಂಟ್ ಆಗಿದ್ದರೆ ಒಳ್ಳೆಯದು ಎಂದು ಹೇಳಿದರು.
ಮಾಜಿ ಸಚಿವ ಸೋಮಣ್ಣ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿ ಸಿ ಪಾಟೀಲ್, ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಸಮಸ್ಯೆ ಕೂಡ ಸರಿಯಾಗುತ್ತದೆ. ಎಲ್ಲ ಸರಿಯಾಗುತ್ತದೆ ಅನ್ನೋ ಆಶಾಭಾವನೆ ಇದೆ ಎಂದರು
ಈ ಸರ್ಕಾರ ಯಾವುದಕ್ಕೂ ಸರಿಯಾಗಿ ಹಣ ಕೊಡ್ತಾಯಿಲ್ಲ. ಯಾವ ಭಾಗ್ಯನೂ ಸಹ ಸರಿಯಾಗಿ ಜಾರಿ ಮಾಡಿಲ್ಲ. ಫಸ್ಟ್ ಒಂದು ತಿಂಗಳ ಹಣ ಮಾತ್ರ ಬಂದಿದ್ದು, ಆಮೇಲೆ ಯಾರಿಗೂ ಸಹ ಹಣ ಬಂದಿಲ್ಲ. ವಿದ್ಯುತ್ ದರ ಡಬಲ್ ಆಗಿದೆ. ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ. ಇಂಥ ಸಂದರ್ಭದಲ್ಲಿ ಎತ್ತಿನಹೊಳೆ ಮಾಡಕ್ಕಾಗಲ್ಲ. ಇರುವ ನೀರಾವರಿ ಯೋಜನೆಯೇ ಸ್ಥಗಿತವಾಗಿದೆ. ಈ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಬಿ ಸಿ ಪಾಟೀಲ್ ಟೀಕಿಸಿದರು.