ಬೆಂಗಳೂರು: ಐಸಿಸ್ ಉಗ್ರರ ಜೊತೆಗಿನ ನಂಟು ಪ್ರಕರಣಕ್ಕೆ (ISIS Network Case) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಕರ್ನಾಟಕದ ಬೆಂಗಳೂರು (Bengaluru) ಸೇರಿದಂತೆ 4 ರಾಜ್ಯಗಳಲ್ಲಿ 4 ರಾಜ್ಯಗಳಾದ್ಯಂತ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ (NIA Raid) ನಡೆಸಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಆರ್.ಸಿ ನಗರ, ಹೆಬ್ಬಾಳ, ಪುಲಿಕೇಶಿ ನಗರ, ಶಿವಾಜಿ ನಗರ, ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿಯೂ ಒಟ್ಟು 9 ತಂಡಗಳು ಕಾರ್ಯಾಚರಣೆ ನಡೆಸಿವೆ.
ಸೋಮವಾರ (ಇಂದು) ಮುಂಜಾನೆಯಿಂದಲೇ ಬಳ್ಳಾರಿಯಲ್ಲಿ ಎನ್ಐಎ ಕಾರ್ಯಾಚರಣೆ ಭರ್ಜರಿಯಾಗಿ ಸಾಗಿದೆ. ನಿಷೇಧಿತ ಪಿಎಫ್ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಬಳ್ಳಾರಿಯ ಶಮೀವುಲ್ಲಾ, ಅಜಾಜ್ ಅಹಮದ್, ಸುಲೇಮಾನ್, ತಬ್ರೇಜ್, ನಿಖಿಲ್ ಅಲಿಯಾಸ್ ಸೂಫಿಯಾನ್, ಮುಜಾಮಿಲ್ ಎಂಬವರನ್ನ ಬಂಧಿಸಲಾಗಿದೆ
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಬಳ್ಳಾರಿಯ ಶಮಿವುಲ್ಲಾನ ಬಳಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಅನ್ನೂ ವಶಪಡಿಸಿಕೊಳ್ಳಲಾಗಿದೆ. ಅಫ್ಘಾನಿಸ್ತಾನಕ್ಕೆ ಹೋಗಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಯತ್ನಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪಿಎಫ್ಐ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ದಾಳಿಯ ಸಮಯದಲ್ಲಿ, ಅಪಾರ ಪ್ರಮಾಣದ ನಗದು, ಶಸ್ತ್ರಾಸ್ತ್ರಗಳು, ಸೂಕ್ಷ್ಮ ದಾಖಲೆಗಳು ಮತ್ತು ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು