ಕೊಪ್ಪಳ: ನಾಡ ಪ್ರಸಿದ್ಧ ಹನುಮಮಾಲಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ರಚಿಸಿರುವ ಹತ್ತಾರು ಸಮಿತಿಗಳ ಅಧ್ಯಕ್ಷರು ಹಾಗೂ ಸಮತಿಯ ಸದಸ್ಯರಾದ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಡಿಸೆಂಬರ್ 17ರಂದು ಸಭೆ ನಡೆಸಿ ಇದುವರೆಗಿನ ಸಿದ್ಧತೆಯನ್ನು ಪರಿಶೀಲಿಸಿದರು.
ಆಯಾ ಸಮಿತಿಗಳು ಹನುಮಮಾಲಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡ ಬಗ್ಗೆ ಜಿಲ್ಲಾಡಳಿತದಿಂದ ಸಿದ್ಧಪಡಿಸಿದ್ದ ಪ್ರಾತ್ಯಕ್ಷಿಕೆಯ ಮೂಲಕ ವಿವಿಧ ಕಾರ್ಯಗಳ ಬಗ್ಗೆ ಸಚಿವರು ಖುದ್ದು ಮಾಹಿತಿ ಪಡೆದರು. ಪ್ರತಿಯೊಂದು ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು.ಗಂಗಾವತಿ ನಗರದ ತಾಪಂ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು,
ಅಂಜನಾದ್ರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 23ರಿಂದ ಡಿಸೆಂಬರ್ 24ರವರೆಗೆ ನಡೆಯಲಿರುವ ಹನುಮಮಾಲಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಬೇಕು. ಪ್ರತಿಯೊಂದು ಸಮಿತಿಯ ಅಧಿಕಾರಿಗಳು ಅಂದು ಕಡ್ಡಾಯ ಕಾರ್ಯಕ್ರಮದ ಸ್ಥಳದಲ್ಲಿದ್ದು ಕಾರ್ಯನಿರ್ವಹಿಸಬೇಕು. ಸಭೆಯಲ್ಲಿ ನೀಡಿರುವ ಸೂಚನೆಗಳನ್ನು ಪಾಲನೆ ಮಾಡಬೇಕು. ಈಗಾಗಲೇ ತಮಗೆ ಲಿಖಿತವಾಗಿ ಒಪ್ಪಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಭೆಯಲ್ಲಿದ್ದ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದಲು ಸಹ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಮುಖ್ಯವಾಗಿ ಕುಡಿಯುವ ಹಾಗೂ ಸ್ನಾನದ ನೀರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಆಗಬೇಕು. ಸುಗಮ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಬೆಟ್ಟದ ಸುತ್ತಲು ವಾಹನಗಳ ಪಾರ್ಕಿಂಗ್ ಗೆ ಶಿಸ್ತು ಬದ್ಧವಾದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.ಪ್ರಸಿದ್ಧ ಅಂಜನಾದ್ರಿಗೆ ಹನುಮಮಾಲಾಧಾರಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಜನಸಂದಣಿ ನಿರ್ವಹಣೆ ಮಾಡಬೇಕು. ಆಹಾರ ವ್ಯವಸ್ಥೆಯು ಅಚ್ಚುಕಟ್ಟಾಗಿ ನಡೆಯಬೇಕು ಎಂದು ತಿಳಿಸಿದರು.
ಎಲ್ಲಾ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರಮುಖ ವೃತಗಳಲ್ಲಿ ವಿಡಿಯೋಗ್ರಫಿ ನಡೆಸಿ ಜನರ ಚಲನವಲನ ಮೇಲೆ ನಿಗಾವಹಿಸಬೇಕು. ಶೋಭಾಯಾತ್ರೆಯಿಂದ ಹನುಮಮಾಲಾ ಕಾರ್ಯಕ್ರಮ ಪೂರ್ಣವಾಗುವವರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಿದರು. ಯಾವುದೇ ಕಡೆಗಳಲ್ಲಿ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ವಿದ್ಯುತ್ ಪೂರೈಕೆ ಮಾಡಬೇಕು. ಅಗ್ನಿ ಅನಾಹುತಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಜೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಿದರು.
MP Renukacharya: ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ಎಂಪಿ ರೇಣುಕಾಚಾರ್ಯ ವಾಗ್ದಾಳಿ
ಅಂಜನಾದ್ರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಜಗಮಗಿಸುವ ಹಾಗೆ ಎಲ್ಲಾ ಕಡೆಗಳಲ್ಲಿ ವಿದ್ಯೂದೀಪಾಲಂಕಾರ ಮಾಡಬೇಕು. ಬೆಟ್ಟದ ಸುತ್ತಲಿನ ರಸ್ತೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಬೇಕು. ದೂರದಿಂದ ನಡೆದು ಬರುವ ಭಕ್ತರಿಗೆ ವಿರಮಿಸಲು ಅಲ್ಲಲ್ಲಿ ಟೆಂಟ್ ಹಾಕಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಮಾತನಾಡಿ, ಮೂಲಭೂತ ಸೌಕರ್ಯ ಸಮಿತಿ, ಆಹಾರ ಸಮಿತಿ, ರಸ್ತೆ ನಿರ್ವಹಣಾ ಸಮಿತಿ, ಆರೋಗ್ಯ ಸಮಿತಿ, ಸ್ವಚ್ಛತಾ ಸಮಿತಿ, ಪ್ರಸಾದ ವಿತರಣಾ ಸಮಿತಿ,
ಸಾರಿಗೆ ಸಮಿತಿ, ವಿದ್ಯುತ್ ಸಮಿತಿ, ಭದ್ರತಾ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ಶಿಷ್ಟಾಚಾರ ಸಮಿತಿ, ಅಬಕಾರಿ ಸಮಿತಿ, ಅರಣ್ಯ ಸಮಿತಿ ಹಾಗೂ ಸಹಾಯವಾಣಿ ಕೇಂದ್ರ ಸಮಿತಿ ಸೇರಿದಂತೆ ಒಟ್ಟು 14 ಸಮಿತಿಗಳನ್ನು ರಚಿಸಿ ಆಯಾ ಸಮಿತಿಗಳಿಗೆ ನಿರ್ದಿಷ್ಟವಾಗಿ ಕಾರ್ಯ ಹಂಚಿಕೆ ಮಾಡಲಾಗಿದೆ. ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರತಿಯೊಂದು ಸಮಿತಿಯ ಅಧಿಕಾರಿಗಳ ಮೊಬೈಲ್ ನಂಬರ್ ದಾಖಲಿಸಿ ಕರೆ ಮಾಡಿ ಮಾಹಿತಿ ಪಡೆದು ಕೆಲಸದ ಬಗ್ಗೆ ಖಾತ್ರಿಪಡಿಸಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಮಾತನಾಡಿ, ಬೇರೆ ಬೇರೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಪಾಳಿ ಪ್ರಕಾರ ಕಾರ್ಯನಿರ್ವಹಿಸಿ 24 ಗಂಟೆಗಳ ಸಮಯ ಎಚ್ಚರಿಕೆಯಿಂದ ಇರಬೇಕು. ಏನಾದರು ಸಮಸ್ಯೆಗಳಾದಲ್ಲಿ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಜಿಪಂ ಸಿಇಓ ರಾಹುಲ್ ಪಾಂಡೆಯ ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಹನುಮಮಾಲಾ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇದಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ ಕೆ.ವಿ., ತಹಸೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿದಂತೆ ಹನುಮಮಾಲಾ ಕಾರ್ಯಕ್ರಮದ ಸಿದ್ಧತಾ ಸಮಿತಿಯಲ್ಲಿರುವ ಅಧಿಕಾರಿಗಳು ಉಪಸ್ಥಿತರಿದ್ದರು.