ರಾಂಚಿ: ತಂದೆಯೊಬ್ಬರು ತನ್ನ ಮುದ್ದಿನ ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಬ್ಯಾಂಡ್ ವಾಲಗದವರನ್ನು ಕರೆದುಕೊಂಡು ಹೋಗಿ ಮಗಳನ್ನು ಮೆರವಣಿಗೆ ಮೂಲಕ ತವರಿಗೆ ಕರೆತಂದಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾರ್ಖಂಡ್ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಹೇಗೆ ಓರ್ವ ಹುಡುಗಿಯನ್ನು ಮದುವೆ ಮಾಡಿ ಕೊಡುವ ವೇಳೆ ಪಟಾಕಿಗಳನ್ನು ಸಿಡಿಸಿ,
ಸಂಗೀತ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಕಳುಹಿಸಿಕೊಡುತ್ತಾರೋ ಅದೇ ರೀತಿ ಇಲ್ಲಿ ಗಂಡನ ಮನೆಯಿಂದ ಮಗಳನ್ನು ಕರೆದುಕೊಂಡು ಬರುವ ವೇಳೆಯೂ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಬಹಳ ಅದ್ದೂರಿಯಾಗಿ ಮಗಳನ್ನು ಆಕೆಯ ಗಂಡನ ಮನೆಯಿಂದ ತಂದೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ. ಪ್ರೇಮ್ ಗುಪ್ತಾ ಎಂಬುವವರೇ ಹೀಗೆ ಮಗಳನ್ನು ಮರಳಿ ತವರು ಮನೆಗೆ ಬಹಳ ಪ್ರೀತಿ ಹಾಗೂ ಸಂಭ್ರಮದಿಂದ ಕರೆಸಿಕೊಂಡ ತಂದೆ.
ತನ್ನ ಮಗಳು ಸಾಕ್ಷಿ ಗುಪ್ತಾಗೆ ಅತ್ತೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಪೋಷಕರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವ ವೇಳೆ ಬಹಳ ಅದ್ದೂರಿ ಸಂಭ್ರಮಾಚರಣೆಯಿಂದ ಬಹಳ ಖರ್ಚುವೆಚ್ಚ ಮಾಡಿ ಮದುವೆ ಮಾಡಿಕೊಡುತ್ತಾರೆ. ಆದರೆ ಅಲ್ಲಿ ಕಿರುಕುಳ ನೀಡುತ್ತಾರೆ ಎಂದು ಗೊತ್ತಾದ ವೇಳೆ ಮದುವೆ ಮಾಡಿ ಕೊಟ್ಟಷ್ಟೇ ಗೌರವದಿಂದ ಆಕೆಯನ್ನು ನೀವು ವಾಪಸ್ ಮನೆಗೆ ಕರೆಸಿಕೊಳ್ಳಬೇಕು ಏಕೆಂದರೆ ಹೆಣ್ಣು ಮಕ್ಕಳು ತುಂಬಾ ಅಮೂಲ್ಯ ಎಂದು ಅವರು ಹೇಳಿದರು.