ಬೆಂಗಳೂರು: ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೊನಾ (Covid-19) ವಕ್ಕರಿಸುವಂತಿದೆ. ಮತ್ತೆ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಉಪತಳಿ ಜೆಎನ್.1 ಭಾರತದಲ್ಲೂ ಇದೀಗ ಕಂಡುಬಂದಿದೆ.
ನೆರೆಯ ಕೇರಳದಲ್ಲಿ (Kerala) ಮೊದಲ ಕೇಸ್ ಪತ್ತೆಯಾಗಿದೆ. ಜೆಎನ್.1 (JN.1) ಒಮಿಕ್ರಾನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದು ಕೂಡ ಕರೆಯಲಾಗುತ್ತದೆ. ಇದು ಅಪಾಯಕಾರಿಯೇ, ಇಲ್ಲವೇ ಎನ್ನುವುದು ಇನ್ನೂ ನಿರ್ಧಾರಿತವಾಗಿಲ್ಲ. ಆದರೆ ಶರವೇಗದಲ್ಲಿ ಹಬ್ಬುತ್ತಿದೆ. ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಕೋವಿಡ್ಗೆ ಬಲಿ ಆಗಿದ್ದಾರೆ. ಇದು ಕಳೆದ 2 ದಿನಗಳಲ್ಲಿ 2ನೇ ಸಾವಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಕಣ್ಣೂರಿನ ಪಾನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅಲರ್ಟ್ ಆಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ 58 ಕೇಸ್ ಅಷ್ಟೇ ಇವೆ. ಆತಂಕ ಬೇಡ ಎಂದಿದ್ದಾರೆ.