ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಮುಂಬೈ ಫ್ರಾಂಚೈಸಿ ಅಚ್ಚರಿಗೆ ದೂಡಿದೆ.
ಅಲ್ಲದೆ, ಮುಂಬೈ ತಂಡದ ವಿರುದ್ಧ ಸಿಡಿದೆದ್ದಿರುವ ರೋಹಿತ್ ಅಭಿಮಾನಿಗಳು ಜರ್ಸಿ ಸುಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಫ್ರಾಂಚೈಸಿಯ ಇನ್ಸ್ಟಾಗ್ರಾಂ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ.
ನಿನ್ನೆಯಷ್ಟೇ ಸೂರ್ಯಕುಮಾರ್ ಯಾದವ್ ಒಡೆದ ಹೃದಯದ ಎಮೋಜಿ ಶೇರ್ ಮಾಡುವ ಮೂಲಕ ತಮ್ಮ ಬೇಸರ ಹೊರಹಾಕಿದ್ದರು. ಇದೀಗ ರೋಹಿತ್ ಪತ್ನಿ ರಿತಿಕಾ ಸಾಜ್ದೇಹ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ಸ್ಟಾಗ್ರಾಂ ಪೋಸ್ಟ್ಗೆ ರಿತಿಕಾ ಪ್ರತಿಕ್ರಿಯಿಸಿದ್ದಾರೆ.
2013 ರಿಂದ 2023ರ ವರೆಗೆ ಒಂದು ದಶಕಗಳವರೆಗೆ ಉತ್ಸಾಹಭರಿತ ಸವಾಲು! ನಿಮ್ಮ ಮೇಲಿನ ಗೌರವ ಹೆಚ್ಚಿದೆ ಎಂದು ಚೆನ್ನೈ ತಂಡ, ರೋಹಿತ್ ಅವರ ನಾಯಕತ್ವದ ಜರ್ನಿಯ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು ಗೌರವ ಸೂಚಿಸಿದೆ.
ಈ ಪೋಸ್ಟ್ಗೆ ರಿತಿಕಾ ಅವರು ಕಾಮೆಂಟ್ ಬಾಕ್ಸ್ನಲ್ಲಿ ಹಳದಿ ಬಣ್ಣದ ಹೃದಯದ ಎಮೋಜಿ ಹಾಕುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಹಳದಿ ಬಣ್ಣಕ್ಕೂ ಚೆನ್ನೈ ತಂಡಕ್ಕೂ ಅವಿನಾಭ ಸಂಬಂಧವಿದೆ. ರೋಹಿತ್ಗೆ ಗೌರವ ಸೂಚಿಸಿದ್ದಕ್ಕೆ ರಿತಿಕಾ ಈ ರೀತಿಯಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಆದರೆ, ರೋಹಿತ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದನ್ನು ಮೌಖಿಕವಾಗಿ ಈವರೆಗೂ ರಿತಿಕಾ ಪ್ರತಿಕ್ರಿಯೆ ನೀಡಿಲ್ಲ.
ಅಂದಹಾಗೆ ಇತ್ತೀಚೆಗಷ್ಟೇ ಗುಜರಾತ್ ಟೈಟಾನ್ಸ್ ತಂಡದಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡ ಖರೀದಿ ಮಾಡಿತು. ಹಾರ್ದಿಕ್ ಅವರನ್ನು ಮುಂಬರುವ ಐಪಿಎಲ್ 17ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಪರ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ರೋಹಿತ್ ಶರ್ಮ ಅವರ ‘ಐಪಿಎಲ್ ನಾಯಕತ್ವ ಯುಗ’ ಅಂತ್ಯಗೊಂಡಂತಾಗಿದೆ.