ಮೈಸೂರು: ಜಾತಿಗಣತಿ ವರದಿಯನ್ನು ಎರಡು ಪ್ರಬಲ ಸಮುದಾಯಗಳು ವಿರೋಧಿಸುತ್ತಿವೆ. ಜಾತಿಗಣತಿಯಿಂದ ಮಾತ್ರ ವೈಜ್ಞಾನಿಕವಾಗಿ ಮೀಸಲಾತಿ ನೀಡಲು ಸಾಧ್ಯ. ಯಾವ ಜನಾಂಗ ಎಷ್ಟಿದ್ದಾರೆ ಎಂದು ತಿಳಿಯಬೇಕು ಎಂದಾದರೆ ಜಾತಿಗಣತಿ ವರದಿಯನ್ನು ಸ್ವೀಕರಿಸಬೇಕು ಎಂದು ಎಎಪಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಶನಿವಾರ ಒತ್ತಾಯಿಸಿದರು.
ಮೈಸೂರಿನಲ್ಲಿ ನಡೆದ ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, 1931ರ ಬಳಿಕ ದೇಶದಲ್ಲಿ ಜಾತಿಗಣತಿ ಆಗಿಯೇ ಇಲ್ಲ. ಆಯಾ ಸರ್ಕಾರಗಳು ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನೀಡುತ್ತಾ ಬಂದಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ, ಮುಸ್ಲಿಂರಿಗೆ ಸದ್ಯ ಯಾವುದೇ ತೊಂದರೆ ಆಗಿಲ್ಲ. ಏಕೆಂದರೆ ಜನಗಣತಿ ವೇಳೆಯಲ್ಲಿಯೇ ಆ ಸಮುದಾಯ ಎಷ್ಟಿದೆ ಎಂಬ ಅಂಕಿಅಂಶಗಳು ಸಿಕ್ಕಿವೆ. ಇಲ್ಲಿ ತೊಂದರೆಗೆ ಒಳಗಾಗಿರುವವರು, ಪ್ರವರ್ಗ 1 ಮತ್ತು ಪ್ರವರ್ಗ 2ಎ ಅಡಿಯಲ್ಲಿ ಬರುವ ಜಾತಿಗಳು. ಈ ವರ್ಗದಲ್ಲಿ ಕುರುಬರು, ಈಡಿಗರನ್ನು ಸೇರಿಸಿ 197 ಜಾತಿಗಳಿವೆ. ಈ ಜಾತಿಗಳಲ್ಲಿ ಜನಸಂಖ್ಯೆ ಎಷ್ಟಿದೆ ಎಂಬುದು ತಿಳಿಯದೇ ಮೀಸಲಾತಿ ನೀಡಲಾಗುತ್ತಿದೆ ಎಂದು ದೂರಿದರು.
ಸರ್ಕಾರ 160 ಕೋಟಿ ರೂ. ವೆಚ್ಚ ಮಾಡಿ ಜಾತಿಗಣತಿ ಮಾಡಿಸಿದೆ. ಕಾಂತರಾಜು ಆಯೋಗ ವರದಿ ನೀಡಿದರೂ 2013ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರೇ ವರದಿಯನ್ನು ಸ್ವೀಕರಿಸಲಿಲ್ಲ. ಜಾತಿಗಣತಿಯ ಪ್ರತಿಗಳು ಕಳೆದಿವೆ ಎಂದು ಹೇಳಲಾಗುತ್ತಿದೆ. ತಂತ್ರಜ್ಞಾನದ ಈ ಯುಗದಲ್ಲಿ ವರದಿ ಕಳೆದುಹೋಗಲು ಸಾಧ್ಯವೇ? ನವೆಂಬರ್ 24ರಂದು ವರದಿ ಸ್ವೀಕರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೂ, ಸ್ವೀಕರಿಸಿಲ್ಲ. ವರದಿ ಸ್ವೀಕರಿಸಿ, ಸದನದಲ್ಲಿ ಮಂಡಿಸಿ, ಚರ್ಚೆಯಾಗಲಿ. ನಂತರ ಅದರ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಮೀಸಲಾತಿಯನ್ನು ವೈಜ್ಞಾನಿಕವಾಗಿ ನೀಡುವಾಗ ಯಾವುದೇ ಜಾತಿಯವರು ವಿರೋಧ ಮಾಡುವುದು ಸರಿಯಲ್ಲ. ಜಾತಿ ಆಧಾರಿತ ದೇಶವನ್ನು ಮಾಡಬೇಡಿ. ಅಧಿಕಾರವೇ ಹೋದರು ಸಿದ್ದರಾಮಯ್ಯನವರು ಯೋಚಿಸುವ ಅಗತ್ಯವಿಲ್ಲ. ವರದಿಯನ್ನು ಸ್ವೀಕರಿಸಿದರೆ, ಯಾವ ಜನಾಂಗ ಎಷ್ಟಿದೆ ಎಂಬುದು ತಿಳಿಯುತ್ತದೆ. ಒಂದು ವೇಳೆ ವರದಿ ಸರಿಯಿಲ್ಲ ಎಂದಾದಲ್ಲಿ ನ್ಯಾಯಾಲಯಕ್ಕೆ ತೆರಳಿ. ಆದರೆ, ವರದಿಯನ್ನೇ ಸ್ವೀಕರಿಸದೆ ಊಹೆ ಮೇಲೆ ಕೆಲ ಸಮುದಾಯಗಳಿಗೆ ಅನ್ಯಾಯವಾಗುತ್ತೆ ಎನ್ನುವುದು ಸರಿಯಲ್ಲ. ಹಿಂದುಳಿದ ವರ್ಗಗಳ ಶಾಸಕರು, ಸಚಿವರು ಜಾತಿ ಗಣತಿ ವರದಿ ಸ್ವೀಕರಿಸಲು ಒತ್ತಾಯಿಸಲಿ ಎಂದರು.
ಮೀಸಲಾತಿ ಸರಿಯಾಗಿ ಬಳಕೆಯಾಗಿಲ್ಲ ಎಂದು ನಾರಾಯಣಸ್ವಾಮಿಯವರು ಸಂಸತ್ತಿನಲ್ಲಿ ಹೇಳಿದ್ದರು. ಜಾತಿಯನ್ನೇ ನೀತಿಯನ್ನಾಗಿ ಮಾಡಿಕೊಂಡ ದೇಶ ಇದು. ಕುಲಕಲುಬುಗಳನ್ನು ಕೊಲ್ಲಲಾಗಿದೆ. ಶ್ರಮದ ಶಿಕ್ಷಣಕ್ಕೆ ಬೆಲೆ ಇಲ್ಲದಂತಾಗಿದೆ. ಒಂದೇ ಸಮಾಜದವರು ರಾಜಕೀಯದಲ್ಲಿ ಹೆಚ್ಚಿದ್ದಾರೆ. ಇನ್ನುಳಿದ ಸಮುದಾಯಗಳಿಗೆ ರಾಜಕೀಯಕ್ಕೆ ಅವಕಾಶವೇ ಇಲ್ಲದಂತಾಗಿದೆ. ಯಾವುದೇ ಜಾತಿಯವರು ಜಾತಿಗಣತಿ ವರದಿ ಅನುಷ್ಠಾನಕ್ಕೆ ವಿರೋಧ ಮಾಡುವುದು ಬೇಡ. ಸದನದಲ್ಲಿ ಒಕ್ಕೂರಲಿನಿಂದ ಹೋರಾಟ ಮಾಡಿ. ನಾವು ಹೋರಾಟಕ್ಕೆ ಬರುತ್ತೇವೆ ಎಂದು ಹೇಳಿದರು.
ಜಾತಿಗಣತಿ ವರದಿ ಸ್ವೀಕರಿಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳು ಮತ್ತು ದಲಿತರು ಸೇರಿ ಹೋರಾಟ ಮಾಡೋಣ. ಸರ್ಕಾರದ ಈ ನಡೆ ವಿರುದ್ಧ ಎಎಪಿ ಹೋರಾಟ ನಡೆಸುತ್ತದೆ. ಯಾವ ಜನಾಂಗ ಎಷ್ಟಿದೆ ಎಂಬುದು ತಿಳಿಯದೆಯೇ ಅತಿಹೆಚ್ಚು ಮೀಸಲಾತಿ ಪಡೆಯುತ್ತಿರುವವರು ಯಾರೆಂದು ವರದಿ ಬಂದ ಬಳಿಕ ತಿಳಿಯುತ್ತದೆ. ಕಾಂಗ್ರೆಸ್, ಬಿಜೆಪಿಯಿಂದ ಆಗುತ್ತಿರುವ ಶೋಷಣೆಯನ್ನು ಎಎಪಿ ಒಪ್ಪುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಅಮಿತ್ ಶಾ ರಾಜೀನಾಮೆ ನೀಡಲಿ
ಪಕ್ಷ ಸಂಘಟಿಸುವ ದೃಷ್ಟಿಯಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿದ್ದರೂ ಏನನ್ನೂ ಮಾಡಿಲ್ಲ. ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರತಾಪ್ ಸಿಂಹ ಎಲ್ಲರ ವಿರುದ್ದ ಆರೋಪಗಳನ್ನು ಮಾಡುತ್ತಲೇ ಬಂದರು. ಪಾಸ್ ಕೊಡುವಾಗ ಯಾರು ಯೋಗ್ಯರು ಎಂದು ತಿಳಿದು ಕೊಡಬೇಕಲ್ಲವೇ. ಇದನ್ನ ನೋಡಿದ್ರೆ ಪ್ರತಾಪ್ ಸಿಂಹ ಅವರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ. ಈ ಬಾರಿ ಟಿಕೆಟ್ ಸಿಗಲ್ಲ ಎಂದು ಹೀಗೆ ಮಾಡಿದ್ದಾರೆಯೇ. ಬಿಜೆಪಿಯವರು ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು. ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ಬೇಜವಾಬ್ದಾರಿತನಕ್ಕೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.