ಮಂಡ್ಯ:- ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ನಿಯಮಾನುಸಾರ ತನಿಖೆ ನಡೆಸಿಲ್ಲ.
ಇದುವರೆಗೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದ ಆಲೆಮನೆಯನ್ನು ಜಪ್ತಿ ಮಾಡಿಲ್ಲ. ಅಲ್ಲಿ ಏನೂ ನಡೆದೇ ಇಲ್ಲವೆಂಬಂತೆ ಆಲೆಮನೆ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ನಿರ್ಲಕ್ಷಿಸಿವೆ. ನಿಯಮಬದ್ಧವಾಗಿ ತನಿಖೆ ನಡೆಸಿದ್ದರೆ ಸಾಕ್ಷ್ಯಗಳನ್ನು ಸಂಗ್ರಹಿಸಬಹುದಾಗಿತ್ತು. ಸಾಕ್ಷ್ಯ ನಾಶಕ್ಕೆ ಅಧಿಕಾರಿಗಳೇ ಎಡೆಮಾಡಿಕೊಟ್ಟಿದ್ದಾರೆ ಎಂದು ದೂಷಿಸಿದರು.
ಆಲೆಮನೆ ಸ್ಕ್ಯಾನಿಂಗ್ ಸೆಂಟರ್ ಆಗಿದ್ದರಿಂದ ಸ್ಕ್ಯಾನ್ ಮಾಡುವ ಮೊದಲಿಗೆ ಜೆಲ್ ಹಚ್ಚುತ್ತಾರೆ. ಗ್ಲೌಸ್ಗಳನ್ನು ಹಾಕಿಕೊಂಡಿರುತ್ತಾರೆ. ಜೆಲ್ ಒರೆಸಿ ಎಸೆದ ಹತ್ತಿಗಳು, ಗ್ಲೌಸ್ಗ್ಗಳು, ಗೋಡೆಯ ಮೇಲೆ ಅಂಟಿರಬಹುದಾದ ಜೆಲ್, ಗರ್ಭಿಣಿ ಸ್ತ್ರೀಯರಿಗೆ ಬಳಸಿ ಬಿಸಾಡಿರುವ ಬಟ್ಟೆಗಳು, ಪ್ರಿಸ್ಕ್ರಿಪ್ಷನ್ಗಳು, ಟ್ಯಾಬ್ಲೆಟ್ಗಳು ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕೆ ಅವಕಾಶಗಳಿದ್ದರೂ ಆರೋಗ್ಯ ಇಲಾಖೆ ಕೈಚೆಲ್ಲಿ ಕುಳಿತಿದ್ದಾರೆ. ಒಮ್ಮೆ ಸಾಕ್ಷ್ಯಗಳು ಸಿಕ್ಕಿದ್ದರೂ ಅವುಗಳನ್ನು ಅವರೇ ನಾಶಪಡಿಸಿರುವ ಸಾಧ್ಯತೆಗಳಿವೆ. ತಜ್ಞ ವೈದ್ಯರು, ತಂತ್ರಜ್ಞರನ್ನು ಸ್ಥಳಕ್ಕೆ ಕರೆಸಿ ಸಮಗ್ರ ಪರಿಶೀಲನೆ ನಡೆಸಿದ್ದರೆ ಸಾಕ್ಷ್ಯ ಸಂಗ್ರಹಿಸಬಹುದಿತ್ತು. ಆರೋಗ್ಯ ಇಲಾಖೆಯವರು ಕಾರ್ಯಪ್ರವೃತ್ತರಾಗದ ಕಾರಣ ಆರೋಪಿಗಳು ಪ್ರಕರಣ ಬೆಳಕಿಗೆ ಬಂದ ೨೦ ದಿನಗಳಲ್ಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದು ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿಗೆ ಸಾಕ್ಷಿ ಎಂದು ಟೀಕಿಸಿದರು.