ಬೆಳಗಾವಿ: ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯ ಆರೋಗ್ಯವನ್ನು ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ ವಿಚಾರಿಸಿತು.
ಸಂಸದರಾದ ಅಪ್ರಜಿತಾ ಸಾರಂಗಿ, ಸುನಿತಾ ದುಗ್ಗಿ, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನೊಳಗೊಂಡ ಐದು ಜನರ ಸಮಿತಿ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು. ಘಟನೆಯಿಂದ ಧೃತಿಗೆಡಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದೆ ಅಪ್ರಜಿತಾ ಸಾರಂಗಿ ಮಾತನಾಡಿ, ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ವಂಟಮೂರಿ ಗ್ರಾಮದಲ್ಲಿ ರಾತ್ರಿ 1.30ರ ಸುಮಾರಿಗೆ ಮನೆಗೆ ನುಗ್ಗಿ, ಮಹಿಳೆಯನ್ನು ಹೊರ ತಂದ ಪುರುಷರು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿ, ಬಳಿಕ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಘಟನೆ ಆದ ಎರಡು ಗಂಟೆ ಬಳಿಕ ಸ್ಥಳಕ್ಕೆ ಪೊಲೀಸರು ಬಂದರು. ಸಿಪಿಐಗೆ ವಿಷಯ ತಿಳಿಸಿದರೂ ಆರು ಗಂಟೆಗೆ ಬರುತ್ತಾರೆ. ಇದೇನು ಸಣ್ಣ ಘಟನೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆದಿವಾಸಿ ಮಹಿಳೆಯರಿಗೆ ಇಲ್ಲಿ ರಕ್ಷಣೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೆ ಈ ಕೃತ್ಯ ಆಗಿರುವುದು ಅಮಾನವೀಯ ಎಂದು ಕಿಡಿಕಾರಿದರು.
ಆಶಾ ಲಾಕ್ರಾ ಮಾತನಾಡಿ, ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ಆದರೂ ಸದನದಲ್ಲಿ ಕಾಂಗ್ರೆಸ್ ನಾಯಕರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ದಲಿತರನ್ನು ಕೇವಲ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಇಡೀ ಸರ್ಕಾರ, ಮುಖ್ಯಮಂತ್ರಿ, ಡಿಜಿಪಿ ಬೆಳಗಾವಿಯಲ್ಲಿದ್ದರೂ ಸ್ಥಳಕ್ಕೆ ಭೇಟಿ ಕೊಡಲಿಲ್ಲ. ಕೃತ್ಯ ನಡೆದ ಬಳಿಕವೂ ಕಾನೂತ್ಮಾಕವಾಗಿ ಮಹಿಳೆಯ ರಕ್ಷಣೆಗೆ ಏನೆಲ್ಲಾ ಆಗಬೇಕಿತ್ತು ಅದು ಎಲ್ಲವೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಉತ್ತರ ಪ್ರದೇಶದ ಹತ್ರಾಸ್ ಹಾಗೂ ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸಂದರ್ಭದಲ್ಲಿ ಅಲ್ಲಿಯೂ ಬಿಜೆಪಿ ಸತ್ಯಶೋಧನಾ ಸಮಿತಿ ಕಳಿಸಿ ಕೊಟ್ಟಿತ್ತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ತಡಬಡಿಸಿದ ಸಮಿತಿ ಸದಸ್ಯರು, ಕರ್ನಾಟಕದ ಮುಖ್ಯಮಂತ್ರಿಯನ್ನೆ ಕೇಳಿ. ಅವರು ಯಾಕೆ ಸ್ಥಳಕ್ಕೆ ಭೇಟಿ ಕೊಟ್ಟು ಮಹಿಳೆಗೆ ಸಾಂತ್ವನ ಹೇಳಲಿಲ್ಲ. ಎಂದು ಹೇಳಿ ಸಮರ್ಪಕವಾಗಿ ಉತ್ತರಿಸಿದೇ ಹೊರಟು ಹೋದರು.
ಈ ವೇಳೆ ಕೇಂದ್ರ ಬಿಜೆಪಿ ಸಮಿತಿಗೆ ಸಂಸದೆ ಮಂಗಲ ಅಂಗಡಿ, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಮಹಾನಗರ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ ಸೇರಿ ಮತ್ತಿತರರು ಸಾಥ್ ಕೊಟ್ಟರು.