ಮುಂಬೈ: ಅಚ್ಚರಿಯ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ 2024ರ ಆವೃತ್ತಿಗೆ ಮತ್ತೆ ಮುಂಬೈ ತಂಡಕ್ಕೆ ಕಂಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಿಸಿದೆ
ಈ ಬಗೆಗಿನ ಮಾಹಿತಿಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು (Mumbai Indians) ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ರೋಹಿತ್ ಶರ್ಮಾ (Rohit Sharma) ಅವರ 10 ವರ್ಷಗಳ ನಾಯಕತ್ವದ ನಂತರ ಹಾರ್ದಿಕ್ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.
2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡದ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. 2023ರ ಐಪಿಎಲ್ನಲ್ಲಿ ರನ್ನರ್ ಅಪ್ ಪ್ರಶಸ್ತಿ ತಂದುಕೊಟ್ಟಿದ್ದರು. ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವ ಇದೀಗ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ತಯಾರಿ ಶುರು ಮಾಡಿದ್ದಾರೆ. ಫ್ರಾಂಚೈಸಿಯನ್ನು 10 ವರ್ಷ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.
ಹಾರ್ದಿಕ್ ಪಾಂಡ್ಯ ಆಯ್ಕೆಯನ್ನು ಫ್ರಾಂಚೈಸಿಯ ಗ್ಲೋಬಲ್ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ಶ್ಲಾಘಿಸಿದ್ದಾರೆ. ಇದು ಪರಂಪರೆ ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯದ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ