ರೋಹಿತ್ ಸಾರಥ್ಯದಲ್ಲಿ ಮುಂಬೈ ತಂಡ 2013, 2015, 2017, 2019, 2020ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಮೊದಲ 5 ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿದ್ದ ಮುಂಬೈ, ರೋಹಿತ್ ನಾಯಕತ್ವ ವಹಿಸಿಕೊಂಡ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿತ್ತು ಎಂಬುದು ವಿಶೇಷ.
ಐಪಿಎಲ್ ನಾಯಕತ್ವದ ಈ ಯಶಸ್ಸಿನಿಂದಲೇ ರೋಹಿತ್ಗೆ ಟೀಮ್ ಇಂಡಿಯಾದ ನಾಯಕತ್ವವೂ ಒಲಿದಿತ್ತು. ರೋಹಿತ್ ತವರಿನ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನೂ ಫೈನಲ್ಗೇರಿಸಿದ್ದರು. ಮುಂದಿನ ವರ್ಷದ ಟಿ20 ವಿಶ್ವಕಪ್ಗೂ ಅವರೇ ಭಾರತ ತಂಡದ ನಾಯಕರಾಗಿರುವ ನಿರೀಕ್ಷೆ ಇದೆ. ಇದರ ನಡುವೆ ಅವರು ಮುಂಬೈ ಇಂಡಿಯನ್ಸ್ ಅಂದರೆ ಫ್ರಾಂಚೈಸಿ ತಂಡವೊಂದರ ನಾಯಕತ್ವ ಕಳೆದುಕೊಂಡಿರುವುದು ಆಘಾತಕಾರಿಯಾಗಿದೆ.
ಹಾರ್ದಿಕ್ ಇತ್ತೀಚೆಗೆ ಮುಂಬೈಗೆ ಮರಳಿದಾಗಲೇ ಮುಂಬೈಗೆ ಭವಿಷ್ಯದ ನಾಯಕರಾಗುವ ನಿರೀಕ್ಷೆ ಇತ್ತು. ಆದರೆ ಈ ಸಲವೇ ನಾಯಕನ ಪಟ್ಟಕ್ಕೇರಿರುವುದು ಅಚ್ಚರಿ ಎನಿಸಿದೆ. ರೋಹಿತ್ ಸಹಮತ ಪಡೆದೇ ಹಾರ್ದಿಕ್ ಈ ಬಾರಿ ನಾಯಕರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ರೋಹಿತ್ ಅನುಮತಿ ಇಲ್ಲದೆ ನಾಯಕತ್ವ ಬದಲಾವಣೆ ಮಾಡಿದ್ದರೆ ಮುಂಬೈ ಇಂಡಿಯನ್ಸ್ ತಂಡದ ಅದರ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ.
ಮುಂಬೈ ಆಟಗಾರರಾಗಿ ರೋಹಿತ್ಗೆ ಇದುವೇ ಕೊನೇ ಐಪಿಎಲ್ ಆಗುವ ಸಾಧ್ಯತೆಯೂ ಇದೆ. 2025ರ ಮೆಗಾ ಹರಾಜಿಗೆ ಮುನ್ನ ರೋಹಿತ್ ಮುಂಬೈ ತಂಡದಿಂದ ಹೊರನಡೆಯುವ ಸಾಧ್ಯತೆಗಳಿವೆ. ಆಗ ರೋಹಿತ್ ನಾಯಕತ್ವದ ಅನುಭವವನ್ನು ಬಳಸಿಕೊಳ್ಳಲು ಇತರ ತಂಡಗಳು ಪ್ರಯತ್ನಿಸಬಹುದು.