ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಶಾಲೆ ಆವರಣದಲ್ಲಿ ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬವನ್ನು ಡಿ. 16ರಂದು ಸಂಜೆ 5ಗಂಟೆಗೆ ಏರ್ಪಡಿಸಲಾಗಿದೆ ಎಂದು ಆಯೋಜಕಕ ರಾಜು ಜರತಾರಘರ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಇತರ ನಾಯಕರು ಆಗಮಿಸುವರು ಎಂದರು.
ಸತತ ಮೂರು ವರ್ಷ ಈ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಿದ್ದೇವೆ. ಇದು ನಾಲ್ಕನೇ ವರ್ಷ. ಈ ವರ್ಷ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು. ಈಗಾಗಲೇ 10 ಶಾಲೆಗಳಲ್ಲಿ ಮಕ್ಕಳಿಗೆ ಆಕಾಶ ಬುಟ್ಟಿ ತಯಾರಿಸುವ ಸ್ಪರ್ಧೆ ನಡೆದಿದೆ. ಬೆಂಕಿಯಿಲ್ಲದೇ ಅಡುಗೆ ತಯಾರಿಸುವುದು, ಮಕ್ಕಳಿಗೆ ಆನ್ಲೈನ್ ಶ್ಲೋಕ ಅಥವಾ ಮಂತ್ರ ಪಠಣ, ವೇಷಭೂಷಣ, ಕೇಶವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿದೆ. ಗೆದ್ದವರಿಗೆ ನಗದು ಬಹುಮಾನ ನೀಡಲಾಗುವುದು. 10 ಲಕ್ಕಿ ಡ್ರಾ ಕೂಪನ್ ಬಹುಮನವನ್ನೂ ಕೊಡಲಾಗುತ್ತಿದೆ ಎಂದರು.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ದೀಪ ಹಚ್ಚುವುದು ನಮ್ಮ ಸಂಸ್ಕೃತಿ. ಇದನ್ನು ಹಬ್ಬವನ್ನಾಗಿ ಆಚರಿಸಿ ಇನ್ನಷ್ಟು ಸಂಭ್ರಮ ಪಡುವ ಉದ್ದೇಶ ಹೊಂದಿದ್ದೇವೆ. ಹಾಗಾಗಿಯೇ ಪ್ರತಿ ವರ್ಷ ಆಕಾಶ ಬುಟ್ಟಿ ಹಬ್ಬ ಆಚರಿಸಲಾಗುತ್ತಿದೆ ಎಂದರು. ಪ್ರಮುಖರಾದ ದೇವದಾಸ ಹಬೀಬ, ಮಿಥುನ ಚವ್ಹಾಣ, ದೀಪಕ ಜಿತೂರಿ, ಪ್ರವೀಣ ಪವಾರ, ವಿನಾಯಕ ಲದ್ವಾ ಇದ್ದರು.