ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಈಗಾಗಲೇ 3 ವರ್ಷ ಕಳೆದಿದೆ. ಈಗ ಅವರ ನಂ.7 ಜೆರ್ಸಿಯನ್ನೂ ನಿವೃತ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ.
ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಧೋನಿ ಅಗ್ರಗಣ್ಯರು. ಭಾರತ ತಂಡಕ್ಕೆ ಮೂರು ಐಸಿಸಿ (ICC) ಟ್ರೋಫಿ ಗೆಲ್ಲಿಸಿಕೊಟ್ಟ ಏಕೈಕ ನಾಯಕ. ಅವರ ಸಾಧನೆಗೆ ಸಮಾನಾರ್ಥಕವಾಗಿದೆ ಜೆರ್ಸಿ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ನಂ. 10 ಶರ್ಟ್ ಕೂಡ ಈಗಾಗಲೇ ಭಾರತೀಯ ಮಂಡಳಿಯಿಂದ ನಿವೃತ್ತಿ ಹೊಂದಿದೆ. ಅಂತೆಯೇ ಭಾರತ ತಂಡಕ್ಕೆ ಧೋನಿ ನೀಡಿದ ಕೊಡುಗೆಯನ್ನು ಗೌರವಿಸಿ ನಂ. 7 ಜೆರ್ಸಿಯನ್ನು ಆ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ
ಭಾರತೀಯ ಜೆರ್ಸಿ ಧರಿಸುವಾಗ 10 ನೇ ಶರ್ಟ್ ಅನ್ನು ಆಯ್ಕೆ ಮಾಡಲು ಯಾರಿಗೂ ಅವಕಾಶವಿಲ್ಲ. ಹಾಗೆಯೇ ಭಾರತೀಯ ತಂಡದಲ್ಲಿರುವ ಆಟಗಾರರು ನಂಬರ್ 7 ಜೆರ್ಸಿ ಧರಿಸುವಂತಿಲ್ಲ ಎಂದು ಬಿಸಿಸಿಐ ಹೇಳಿದೆ.
ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರು ಎಂ.ಎಸ್.ಧೋನಿಯ ನಂಬರ್ 7 ಜೆರ್ಸಿಯನ್ನು ಆಯ್ಕೆ ಮಾಡುವಂತಿಲ್ಲ. ಧೋನಿ ಆಟಕ್ಕೆ ನೀಡಿದ ಕೊಡುಗೆಗಾಗಿ ಅವರ ಟೀ-ಶರ್ಟ್ ಅನ್ನು ನಿವೃತ್ತಿ ಮಾಡಲು ಬಿಸಿಸಿಐ ನಿರ್ಧರಿಸಿದೆ. ಲಭ್ಯವಿರುವ ಸಂಖ್ಯೆಗಳ ಪಟ್ಟಿಯಿಂದ ನಂ.10 ಈಗಾಗಲೇ ಹೊರಗಿದೆ” ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ