ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಜಮಖಂಡಿ ಅರ್ಬನ್ ಬ್ಯಾಂಕ್ನ ಜಿ.ಎಸ್.ನ್ಯಾಮಗೌಡ ಪರ ಪ್ರಚಾರ ಸಭೆಯಲ್ಲಿ ಅವಳಿ ನಗರದ ಸದಸ್ಯರ ಪರ ಮಾತನಾಡಿದ ಧುರೀಣ ರಾಜಶೇಖರ ಸೋರಗಾಂವಿ. ಜಮಖಂಡಿ ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ನಾಮ್ ಕೆ ವಾಸ್ತಾ ಎಂಬಂತೆ ಬನಹಟ್ಟಿಯ ಒಬ್ಬನೇ ಅಭ್ಯರ್ಥಿಯನ್ನು ಪ್ರತಿ ಬಾರಿ ಪೆನಲ್ನಲ್ಲಿ ತೆಗೆದುಕೊಂಡರೂ ನಮ್ಮ ಪ್ರದೇಶದ ಸದಸ್ಯರ ಮತಗಳನ್ನು ಪಡೆದುಕೊಂಡರೂ ಜಮಖಂಡಿ ಪ್ರದೇಶದ ಸದಸ್ಯರ ನೀರಸ ಪ್ರತಿಕ್ರಿಯೆ ಕಾರಣ ಆದ್ಯತೆಯ ಮತಗಳ ಕೊರತೆಯಿಂದ ನಮ್ಮ ಅಭ್ಯರ್ಥಿ ಪರಾಭವಗೊಳ್ಳುವುದು ನಿರಂತರವಾಗಿದೆ.
ಜಮಖಂಡಿ ಮತದಾರರು ಹೆಚ್ಚಿದ್ದು, ರಬಕವಿ-ಬನಹಟ್ಟಿ ಮತದಾರರ ಸಂಖ್ಯೆ ಕಡಿಮೆಯಿರುವ ಕಾರಣ ನಮ್ಮ ಅಭ್ಯರ್ಥಿಗಳತ್ತ ಮತ ಬಾರದ ಕಾರಣ ನಾವು ವಂಚಿತರಾಗುತ್ತಿದ್ದೇವೆ. ಈ ಬಾರಿ ಜಿ.ಎಸ್.ನ್ಯಾಮಗೌಡ ಪೆನಲ್ನಲ್ಲಿ ನಮ್ಮ ಭಾಗದ ಯುನೂಸ್ ಚೌಗಲಾ ಮತ್ತು ರಾಜೇಂದ್ರ ಅಂಬಲಿಯವರನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಪೆನೆಲ್ನ ಪ್ರತಿಯೊಬ್ಬರೂ ನಮ್ಮ ಪ್ರದೇಶದ ಅಭ್ಯರ್ಥಿಗಳಿಗೆ ಜಮಖಂಡಿ ಮತದಾರರಿಂದ ಮತ ಹಾಕಿಸಬೇಕು.
ನಾವು ರಬಕವಿ-ಬನಹಟ್ಟಿ ಪ್ರದೇಶದಿಂದ ಬಂದು ನಿಮಗೆ ಮತ್ತು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕುವ ನಿಷ್ಠೆ ತೋರ್ಪಡಿಸಿದ್ದೇವೆ. ಅದರಂತೇ ನೀವೂ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿಸುವ ಮೂಲಕ ಪೂರ್ತಿ ಪೆನಲ್ ಗೆಲವಿಗೆ ಶ್ರಮಿಸಿದರೆ ಮಾತ್ರ ನಾವು ಈ ಬಾರಿ ಮತ ಹಾಕಲು ಜಮಖಂಡಿಗೆ ಬರುತ್ತೇವೆ ಇಲ್ಲವಾದರೆ ನಾವು ಮತದಾನವನ್ನೇ ಬಹಿಷ್ಕರಿಸುತ್ತೇವೆಂದು ಧುರೀಣ ರಾಜಶೇಖರ ಸೋರಗಾಂವಿ ಖಡಕ್ ಎಚ್ಚರಿಕೆ ನೀಡಿದರು.
ಜಮಖಂಡಿ ಅರ್ಬನ್ ಬ್ಯಾಂಕ್ ಚುನಾವಣೆ ನಿಮಿತ್ಯ ಜಿ.ಎಸ್.ನ್ಯಾಮಗೌಡ ತಂಡದವರು ಮತಯಾಚನೆಗೆ ಬಂದ ಸಮಯದಲ್ಲಿ ಅವಳಿ ನಗರದ ಪರವಾಗಿ ಮಾತನಾಡಿದ ಸೋರಗಾಂವಿ ಪೆನಲ್ ಸದಸ್ಯರೆಲ್ಲರ ಗೆಲವಿಗೆ ನೀವು ಶ್ರಮಿಸಿದರೆ ಅವಳಿ ನಗರದ ಸದಸ್ಯರು ಮತ ಹಾಕಲು ಬರುವುದಾಗಿ ಸ್ಪಷ್ಟವಾಗಿ ನುಡಿದರು. ಇನ್ನೋರ್ವ ಧುರೀಣ ರಾಜೇಂದ್ರ ಭದ್ರನ್ನವರ ಮಾತನಾಡಿ ಅರುಣ ಶಹಾ ಪೆನಲ್ನಲ್ಲಿ ಬನಹಟ್ಟಿಯ ಪ್ರತಿನಿಧಿಯಾಗಿ ಸತತ ಸುರೇಶ ಚಿಂಡಕ ಹೆಸರು ಮಾತ್ರ ಇರುವುದಕ್ಕೆ ಆಕ್ಷೇಪಿಸಿದರು.
ನಮ್ಮಲ್ಲಿ ನಾಯಕರ ಕೊರತೆ ಇಲ್ಲ ಆದರೆ ಕೊಳಕೆಬ್ಬಿಸುವವರನ್ನು ಮಾತ್ರ ಪೆನಲ್ನಲ್ಲಿ ಸೇರ್ಪಡೆಗೊಳಿಸುವುದನ್ನು ವಿರೋಧಿಸುತ್ತೇವೆ. ಈ ಬಾರಿ ಹಿರಿಯ, ಸ್ವಚ್ಛ ಮನಸ್ಸಿನ ಜಿ.ಎಸ್.ನ್ಯಾಮಗೌಡ ಪೆನಲ್ನಲ್ಲಿ ನಮ್ಮ ಇಬ್ಬರು ಪ್ರತಿನಿಧಿಗಳನ್ನು ಸೇರಿಸಿಕೊಂಡಿದ್ದರಿಂದ ನಾವು ನಿಮ್ಮ ಪೆನಲ್ಗೆ ಬೆಂಬಲಿಸುತ್ತೇವೆ. ಅದಕ್ಕೆ ಪ್ರತಿಯಾಗಿ ಜಮಖಂಡಿ ಸದಸ್ಯರ ಮತಗಳೂ ನಮ್ಮ ಅಭ್ಯರ್ಥಿಗಳಿಗೆ ದೊರೆಯುವಂತೆ ನೀವೆಲ್ಲರೂ ಶ್ರಮಿಸಬೇಕೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಯುವ ಧುರೀಣ ರಾಹುಲ್ ಕಲೂತಿ ಈ ಬಾರಿಯೂ ನಾವು ಸಂಧಾನದ ಮೂಲಕ ಅವಿರೋಧ ಆಯ್ಕೆಗೆ ಮುಕ್ತ ಆಹ್ವಾನ ನೀಡಿದ್ದೇವು. ಆದರೆ ಅರುಣ ಶಹಾ ಕೊನೆಯವರೆಗೂ ಸಹಮತ ವ್ಯಕ್ತಪಡಿಸಿ ಕೊನೇ ಘಳಿಗೆಯಲ್ಲಿ ತಮ್ಮದೇ ಪೆನಲ್ ರಚಿಸಿಕೊಂಡು ಆಖಾಡಕ್ಕಿಳಿದ ಕಾರಣ ನಮಗೆ ಮತ್ತೊಂದು ಪೆನಲ್ ಮೂಲಕ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆಯಾಯಿತು. ರಾಜಕೀಯದಿಂದ ದೂರ ಸರಿದಿದ್ದ ಜಿ.ಎಸ್.ನ್ಯಾಮಗೌಡರ ಮನವೊಲಿಸಿ ಅವರ ಅನುಭವಿಕ ನಾಯಕತ್ವದಲ್ಲಿ ಸ್ಪರ್ಧೆಗಿಳಿದಿದ್ದೇವೆ. ಕಳೆದ ಚುನಾವಣೆಗಳಲ್ಲಿ ಪ್ರಮಾದಗಳಾಗಿವೆ.
ಅವುಗಳನ್ನು ಸರಿಪಡಿಸಿಕೊಂಡು ರಬಕವಿ-ಬನಹಟ್ಟಿ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ನಾವು ನಿರ್ಧರಿಸಿದ್ದು, ನಿಮ್ಮ ಇಬ್ಬರೂ ಅಭ್ಯರ್ಥಿಗಳ ಗೆಲವಿಗೆ ಕಂಕಣಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ವೇದಿಕೆಯಲ್ಲಿ ವಿರುಪಾಕ್ಷಯ್ಯ ಕಂಬಿ, ಶಿವಾನಂದ(ಕಾಡು) ಜಿರಲಿ, ಬಸವರಾಜ ಕಡ್ಡಿ, ಯುನೂಸ್ ಚೌಗಲಾ, ರಾಜೇಂದ್ರ ಅಂಬಲಿ, ಡಾ.ಪಿ.ವಿ.ಪಟ್ಟಣ, ಬಸವಂತ ಜಾಡಗೌಡ, ಈಶ್ವರ ಬಿದರಿ, ಮಲ್ಲಿಕಾರ್ಜುನ ಬಾಣಕಾರ, ಮಹಾದೇವ ಚರಕಿ, ಶ್ರೀಶೈಲ ದಬಾಡಿ, ಶಂಕರ ಜಾಲಿಗಿಡದ, ಬಸವರಾಜ ದಲಾಲ್, ಸೋಮು ಗೊಂಬಿ, ಮಲ್ಲಿಕಾರ್ಜುನ ಭದ್ರನ್ನವರ, ಅಶೋಕ ಕೋತೀನ, ಬಸವರಾಜ ಯಂಡಿಗೇರಿ ಸೇರಿದಂತೆ ಸಹಸ್ರಾರು ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ