ಬೆಂಗಳೂರು: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಹೆಚ್ಚಾಗುವ ಸಾಧ್ಯತೆಯಿದೆ. ಈ ಸಂಬಂಧ ಅಧಿವೇಶನದಲ್ಲಿ (Belagavi Session) ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ (Karnataka Government) ಹೇಳಿದೆ.
ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೇ ಖಾಸಗಿ ಬ್ರ್ಯಾಂಡ್ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ
ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ.
ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.