ಬೆಳಗಾವಿ:- ಭ್ರೂಣಹತ್ಯೆ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದ ರಾಜ್ಯದಲ್ಲಿ ಭ್ರೂಣಹತ್ಯೆ ತಡೆಗಟ್ಟುವ ಕುರಿತ ವಿಷಯಕ್ಕೆ ಉತ್ತರಿಸಿದ ಸಚಿವರು, ಆರೋಗ್ಯ ಇಲಾಖೆಯು 1994ರಲ್ಲಿ ರಚನೆಗೊಂಡಿರುವ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಅನ್ವಯ ಲಿಂಗ ಪತ್ತೆ ನಿಷೇಧಿಸಿದೆ. ಆದರೂ ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. 2002 ರಿಂದ 2023ರ ಆರೋಗ್ಯ ಇಲಾಖೆಯ ಈ ಕುರಿತ ವರದಿ ನೋಡಿದಾಗ ಕೇವಲ 100 ಪ್ರಕರಣಗಳು ದಾಖಲಾಗಿವೆ. ಗಂಭೀರವಾಗಿ ಪರಿಗಣಿಸದಿರುವುದು ತಿಳಿದು ಬರುತ್ತದೆ. ಕಳೆದ ವರ್ಷ 1000ಕ್ಕೆ 947 ಇದ್ದ ಲಿಂಗಾನುಪಾತ ಪ್ರಸಕ್ತ ವರ್ಷ 929ಕ್ಕೆ ಇಳಿದಿದೆ. ಈ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸುವ ಮತ್ತು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವವರನ್ನು ಕಠಿಣವಾಗಿ ಶಿಕ್ಷಿಸುವ ಕ್ರಮವಾಗಬೇಕು ಎಂದು ಹೇಳಿದರು.
ಸರ್ಕಾರವು ಭ್ರೂಣಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಈ ಕುರಿತು ಸಿ.ಐ.ಡಿ ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖಾ ವರದಿಯನ್ನು ಪಡೆಯಲು ಸರ್ಕಾರ ಕ್ರಮವಹಿಸಲಿದೆ. ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಲಾಗಿದೆ. ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಗ್ರಾಮಮಟ್ಟದಿಂದ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕುರಿತು ದೀರ್ಘಕಾಲಿನ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.