ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಹುಲುಕುಡಿ ಬೆಟ್ಟದ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇಗುಲದಲ್ಲಿ ಕಡೆಯ ಕಾರ್ತೀಕ ಸೋಮವಾರದ ಪ್ರಯುಕ್ತ ಮಂಗಳವಾರ ರಾತ್ರಿ 13ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ವೀರಭದ್ರ ಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಗೆ ಬೆಳಿಗ್ಗೆ ಅಭಿಷೇಕ ನೆರವೇರಿಸಿ, ವಿಶೇಷ ಅಲಂಕಾರ ಮಾಡಲಾಯಿತು. ಸಂಜೆ ಉಯ್ಯಾಲೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವದ ಬಳಿಕ ದೀಪೋತ್ಸವ ಆರಂಭಿಸಲಾಯಿತು. 5 ಸಾವಿರಕ್ಕೂ ಹೆಚ್ಚು ಜನರು ದೀಪೋತ್ಸವದಲ್ಲಿ ಭಾಗವಹಿಸಿ ಮಣ್ಣಿನ ದೀಪ ಬೆಳಗಿದರು.
ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ಒಕ್ಕಲುಗಳು ಸೇರಿದಂತೆ ದೊಡ್ಡಬಳ್ಳಾಪುರ, ಬೆಂಗಳೂರು, ಗೌರಿಬಿದನೂರು ಹಾಗೂ ತುಮಕೂರು ಭಾಗಗಳಿಂದ ಭಕ್ತರು ಆಗಮಿಸಿ ದೀಪ ಹಚ್ಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಕಳೆದ 13 ವರ್ಷಗಳಿಂದ ಹುಲುಕಡಿ ಬೆಟ್ಟದ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಾಲಯದ ಆಡಳಿತ ಮಂಡಳಿ ದೀಪೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ರಾಜ್ಯದ ನಾನಾ ಭಾಗಗಳಿಂದ ದೀಪೋತ್ಸವಕ್ಕೆ 5 ಸಾವಿರ ಭಕ್ತರು ಆಗಮಿಸಿ ದೀಪ ಹಚ್ಚಿದ್ದಾರೆ. ಎಲ್ಲರಿಗೂ ದೇವಾಲಯದ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಸದಸ್ಯ ಚನ್ನೇಗೌಡ ಹೇಳಿದರು.
ಫೆ.15ರಂದು ಹುಲುಕಡಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ ಜರುಗಲಿದ್ದು, ಬಸ್ ಸೇವೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯಬೇಕು ಎಂದು ಅವರು ಕೋರಿದರು.