ಬಿಗ್ಬಾಸ್ ಮನೆಯಲ್ಲಿ ಕಾರ್ತಿಕ್ ರಾಜಕೀಯ ಮಾಡ್ತಿದ್ದಾರೆ! ಅಲ್ಲಲ್ಲ, ರಾಜಕೀಯ ಶಾಸ್ತ್ರದ ಪಾಠ ಮಾಡ್ತಿದ್ದಾರೆ. ಆ ಪಾಠ ಹೇಗಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ.
ಈ ವಾರದ ಬಿಗ್ಬಾಸ್ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಹೈಯರ್ ಎಜುಕೇಷನ್ಗೆ ಕಾಲಿಟ್ಟಂತಿದೆ. ಚೇಷ್ಟೆಗಳು ಮುಗಿದು ಗಂಭೀರ ಚರ್ಚೆಗಳು ತರಗತಿಯಲ್ಲಿ ನಡೆಯುತ್ತಿದೆ. ಚರ್ಚೆಗೆ ಬುನಾದಿ ಹಾಕಿಕೊಟ್ಟವರು ಇಂದಿನ ಬಿಗ್ಬಾಸ್ ವಿದ್ಯಾಲಯದಲ್ಲಿ ಪಾಠ ಮಾಡುತ್ತಿರುವ ಕಾರ್ತಿಕ್.
ಕಾರ್ತಿಕ್ ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದಾರೆ. ಅದರಲ್ಲಿಯೂ ಉತ್ತಮ ನಾಯಕತ್ವ ಹೇಗಿರಬೇಕು ಎಂಬುದರ ಕುರಿತು ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ.
‘ಬಿಗ್ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ’ ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತಾಡಲು ಪ್ರಾರಂಭಿಸಿದ್ದಾರೆ.
‘ಮನೆಯೊಳಗೆ ಯಾರಿಗೆ ಕೋಪ ನಿಯಂತ್ರಣ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ?’ ಎಂಬ ಪ್ರಶ್ನೆಗೆ ಸಂಗೀತಾ ತಾನಾಗೇ, ‘ನನ್ನ ಹೆಸ್ರೇ ಬರ್ದುಬಿಡಿ’ ಎಂದು ಹೇಳಿದ್ದಾರೆ. ಅದಕ್ಕೆ ನಕ್ಕ ಕಾರ್ತಿಕ್, ‘ಏನಪ್ಪಾ ಈವತ್ತು ಸಂಗೀತಾ ಎಲ್ಲನೂ ಅವರಾಗೇ ಒಪ್ಕೋತಿದಾರೆ?’ ಎಂದು ನಕ್ಕಿದ್ದಾರೆ. ಮನೆಯೊಳಗೆ ಯಾರು ಕೆಟ್ಟ ರಾಜಕೀಯ ಮಾಡ್ತಾರೆ ಎಂದು ಕೇಳಿದ್ದಕ್ಕೆ ಸಂಗೀತಾ, ‘ವಿನಯ್’ ಎಂದು ಹೇಳಿದ್ದಾರೆ. ‘ಅದಕ್ಕೊಂದು ಉದಾಹರಣೆ ಕೊಡಿ’ ಎಂದು ಕೇಳಿದ್ದಾರೆ ಕಾರ್ತಿಕ್. ಇದು ಸಂಗೀತಾಗೆ ನೋವುಂಟುಮಾಡಿದೆ.
ಟಾಸ್ಕ್ ಮುಗಿದ ಮೇಲೆ ಬೆಡ್ರೂಮ್ನಲ್ಲಿ ಕಾರ್ತಿಕ್ ಜೊತೆಗೆ ಮಾತಾಡುತ್ತ, ‘ಕಾರ್ತಿಕ್ ಯಾಕೆ ಹಿಂಗಾಡ್ತಿದಾರೆ? ಅವ್ರಿಗೆ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ ನಿಂಗೆ?’ ಎಂದು ಡ್ರೋಣ್ ಪ್ರತಾಪ್ಗೆ ಕೇಳಿದ್ದಾರೆ.
ಒಟ್ಟಾರೆ ಬಿಗ್ಬಾಸ್ ಮನೆಯೊಳಗಿನ ಶಾಲೆ ಆಟದ ಹಂತ ದಾಟಿ ಅಸಮಧಾನದ ಹೊಗೆ ನಿಧಾನಕ್ಕೆ ಏಳುತ್ತಿದೆ. ಅದು ಯಾವಾಗ ಕಿಡಿಯಾಗಿಹೊಮ್ಮುತ್ತದೆ? ಯಾರನ್ನೆಲ್ಲ ಸುಡುತ್ತದೆ? ಕಾದು ನೋಡಿ ತಿಳಿಯಬೇಕಷ್ಟೆ.