ಬೆಂಗಳೂರು:- ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ದಂಪತಿಯನ್ನು ಅರೆಸ್ಟ್ ಮಾಡಲಾಗಿದೆ. ಉದಯ್.ಬಿ ಹಾಗೂ ತೀರ್ಥಾ ಗೌಡ ಬಂಧಿತ ದಂಪತಿ ಎಂದು ಗುರುತಿಸಲಾಗಿದ್ದು,ಈ ಹಿಂದೆ ಇನ್ಶೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳಿಬ್ಬರಿಗೂ ಅದರ ಜ್ಞಾನವಿತ್ತು.
ಕೋವಿಡ್ ನಂತರ ಬರುತ್ತಿದ್ದ ಆದಾಯ ಇಬ್ಬರಿಗೂ ಸಾಕಾಗುತ್ತಿರಲಿಲ್ಲ. ಇದರಿಂದ ಅಡ್ಡದಾರಿ ಹಿಡಿದಿದ್ದ ದಂಪತಿಗಳು, ಇಂದಿರಾನಗರದಲ್ಲಿ ಶ್ರೀನಿಧಿ ಇನ್ಫೋಸೋರ್ಸ್ ಎಂಬ ಕಚೇರಿಯನ್ನು ಆರಂಭಿಸಿದ್ದರು. ಆ ಕಚೇರಿಯಲ್ಲಿ 4 ರಿಂದ 5 ಜನರು ಟೆಲಿ ಕಾಲರ್ ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ಇನ್ಶೂರೆನ್ಸ್ ಲ್ಯಾಪ್ಸ್ ಆಗಿರುವ ಪಾಲಿಸಿದಾರರುಗಳಿಗೆ ಪಾಲಿಸಿ ಹಣ ಕಟ್ಟಿದಲ್ಲಿ ಇನ್ಶೂರೆನ್ಸ್ ಹಣವು ದೊರೆಯುವುದು ಅಥವಾ ಈಗಾಗಲೇ ಕಂತನ್ನು ಕಟ್ಟಿ ಬಿಟ್ಟಿರುವ ಹಣಕ್ಕೆ ಬಡ್ಡಿ ಸಮೇತ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿಸುವ ಕೆಲಸವನ್ನು ಮಾಡಿಸುತ್ತಿದ್ದರು.
ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ 1 ಕೋಟಿ ರೂ. ಪಾಲಿಸಿ ಮಾಡಿಸಿದ್ದಲ್ಲಿ 5 ಕೋಟಿ ರೂ. ಹಣವು ಬರುತ್ತದೆ ಎಂದು ನಂಬಿಸಿ, ಅವರ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿಯೂ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವಂತೆ ಅಮಿಷವೊಡ್ಡಿ ಹಣ ಪಡೆದುಕೊಂಡು ತಮ್ಮ ಸ್ವಂತ ಬ್ಯಾಂಕ್ ಖಾತೆ ಹಾಗೂ ತಮ್ಮ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಳ್ಳುತ್ತಿದ್ದರು.
ಈಗ ಆರೋಪಿ ದಂಪತಿಯನ್ನು ಬಂಧಿಸಲಾಗಿದ್ದು, ಸುಮಾರು 1.80 ಕೋಟಿ ರೂ ವಂಚಿಸಿ, 40 ಲಕ್ಷ ರೂ. ಹಣವನ್ನು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಹಿರಿಯ ನಾಗರಿಕರಿಗೆ ವಂಚನೆ ಮಾಡಿರುವ ಬಗ್ಗೆ ತನಿಖೆಯಿಂದ ಬೆಳಕಿಗೆ ಬಂದಿದೆ.