ಬಾಗಲಕೋಟೆ: ನವೀನ ಚಟುವಟಿಕೆಗಳ ಮೂಲಕ ಬೋಧನೆ ಮಾಡಿ ಮಕ್ಕಳ ಕಲಿಕೆ ಸುಗಮ ಮಾಡಬೇಕು. ಜ್ಞಾನದ ಜೊತೆಗೆ ಆತ್ಮವಿಶ್ವಾಸ ಬೆಳೆಸಬೇಕು. ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ ಹತ್ತಿರವಾದಾಗ ಮಕ್ಕಳು ಆಪ್ತರಾಗಿ ಪರಿಣಾಮಕಾರಿಯಾಗಿ ಕಲಿಯುತ್ತಾರೆ ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ವಿಭಾಗದ ನಿರ್ದೇಶಕರಾದ ಪ್ರಸನ್ನಕುಮಾರ ಅಭಿಪ್ರಾಯಪಟ್ಟರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ಕೊಣ್ಣೂರ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರ,
ಹಾಗೂ ಸಹ ಶಿಕ್ಷಕರ ಪ್ರೇರಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಎಷ್ಟು ಎತ್ತರವಿದ್ದರೇನು ಹತ್ತಿರವಾಗದಿದ್ದರೆ ಹೇಗೆ ಎನ್ನುವ ಕವಿ ದೇವನೂರು ಮಹಾದೇವ ಅವರ ಕವಿತೆಯ ಸಾಲನ್ನು ನೆನಪಿಸಿದ ಅವರು ಮುಗ್ಧ ಮನಸ್ಸಿನ ಮಕ್ಕಳ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವ ದೃಷ್ಟಿಯಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಹಾರ್ಡ್ ವರ್ಕ್ ಮಾಡುವ ಜೊತೆಗೆ ಅದಕ್ಕೆ ಸ್ಮಾರ್ಟ್ ಟಚ್ ನೀಡಿದರೆ ಶಿಕ್ಷಕರ ಬೋಧನೆ ಇನ್ನೂ ಪರಿಣಾಮಕಾರಿಯಾಗುತ್ತದೆ. ಸಾಮಾನ್ಯ ಬೋಧನೆಯೊಂದಿಗೆ ರಸಪ್ರಶ್ನೆ, ವಿದ್ಯಾರ್ಥಿಗಳ ಮನೆ ಭೇಟಿ, ಗುಂಪು ಅಧ್ಯಯನ, ವಿಶೇಷ ತರಗತಿ, ಪಾಲಕರೊಂದಿಗೆ ಸಂಪರ್ಕ, ವಿಷಯ ರೂಢಿಸುವಿಕೆ, ನಿರಂತರ ವಿವಿಧ ರೀತಿಯ ಮೌಲ್ಯಮಾಪನ ಇತ್ಯಾದಿಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸೃಜನಶೀಲತೆ, ಆತ್ಮವಿಶ್ವಾಸ ಬೆಳೆಸುತ್ತವೆ ಎಂದು ತಿಳಿಸಿದರು.
ಪ್ರಾಚಾರ್ಯ ಈಶ್ವರ್ ನಾಯಕ ಮಾತನಾಡಿ ವಿದ್ಯಾರ್ಥಿಗಳು ಬರೀ ಪಾಸಾಗುವುದು ಮುಖ್ಯ ಅಲ್ಲ. ಗುಣಮಟ್ಟದ ಉತ್ತೀರ್ಣತೆ ಮುಖ್ಯ. ಪುನರಾವರ್ತನೆ ಮಾಡುವುದರಿಂದ ಮಕ್ಕಳಿಗೆ ವಿಷಯ ಮನನವಾಗಿ ಫಲಿತಾಂಶ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ ಕೆ ಬಸಣ್ಣವರ ಮಾತನಾಡಿ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಗೊಳಿಸಲು ತಾಲೂಕಿನಲ್ಲಿ ನಾನೂ ಪಾಸಾಗುವೆ, ಪರಸ್ಪರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ, ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಕ್ರಮ,
ಶೈಕ್ಷಣಿಕ ಮೌಲ್ಯಮಾಪನ, ಥಿಂಕ್ ಬಿಗ್ ಅಟ್ 100 ಪರ್ಸೆಂಟ್ ಇತ್ಯಾದಿಗಳ ಮೂಲಕ ಪ್ರಯತ್ನಿಸಲಾಗುತ್ತಿದ್ದು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸ್ಪಂದನೆ ಉತ್ತಮವಾಗಿದೆ ಎಂದರು. ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರಾಚಾರ್ಯ ಬಸವರಾಜ ಕೊಣ್ಣೂರ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಬಹಳಷ್ಟು ಬುದ್ಧಿವಂತರು. ನಾವಿನ್ಯಯುತ ಪ್ರಯೋಗಗಳ ಮೂಲಕ ಅವರಲ್ಲಿ ಇರುವ ಜ್ಞಾನ, ಕೌಶಲ್ಯ, ಕ್ರಿಯಾಶೀಲತೆಯನ್ನು ವೃದ್ಧಿಸುವ ಕಾರ್ಯ ಮಾಡಬೇಕು ಎಂದು ಕರೆ ಕೊಟ್ಟರು.
ರಬಕವಿ ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು, ಎಲ್ಲ ಶಾಲೆಗಳ ಇಂಗ್ಲಿಷ್ ಹಾಗೂ ಕೋರ್ ವಿಷಯಗಳ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿ ಪ್ರೇರಣೆ ಪಡೆದರು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಶ್ರೀಶೈಲ ಬುರ್ಲಿ. ಕ್ಷೇತ್ರ ಸಮನ್ವಯ ಅಧಿಕಾರಿ ರಮೇಶ ಅವಟಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ