ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದ ಕ್ಷಮತಾ ಸೇವಾ ಸಂಸ್ಥೆ ಹಾಗೂ ಎಸ್ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್ಜಿವಿ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಸಸಿಗೆ ನೀರುಣಿಸುವ ಮೂಲಕ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.
ಉಪ್ಪಿನ ಬೆಟಗೇರಿ ಗ್ರಾಮವಷ್ಟೇ ಅಲ್ಲದೇ ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರೂ ಸಹ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಲಾಭ ಪಡೆದುಕೊಂಡರು. ಫಿಜಿಶಿಯನ್ನರು, ನೇತ್ರ ಶಸ್ತ್ರಚಿಕಿತ್ಸಕರು, ಶಸ್ತ್ರ ಚಿಕಿತ್ಸಕರು, ಚರ್ಮ ರೋಗ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಚಿಕ್ಕಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ನರರೋಗ ತಜ್ಞರು, ದಂತ ವೈದ್ಯರು ಹಾಗೂ ಎಸ್ಡಿಎಂ ನಾರಾಯಣ ಹೃದಯಾಲಯದ ಹೃದಯ ರೋಗ ತಜ್ಞರು ಒಂದೇ ಸೂರಿನಡಿ ಲಭ್ಯವಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವ ಮೂಲಕ ಉಚಿತವಾಗಿ ಔಷಧಿ ಕೂಡ ವಿತರಣೆ ಮಾಡಿದರು.
ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಗಂಗಾಧರ ಪಾಟೀಲ ಕುಲಕರ್ಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಚೆನ್ನಬಸಪ್ಪ ಮಸೂತಿ, ವಿದ್ಯಾದಾನ ಸಮಿತಿ ಅಧ್ಯಕ್ಷ ವೀರಣ್ಣ ಪರಾಂಡೆ, ವಿದ್ಯಾದಾನ ಸಮಿತಿ ಗೌರವ ಕಾರ್ಯದರ್ಶಿ ಗಂಗಪ್ಪ ಜವಳಗಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.