ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿ ಸದಸ್ಯರು ನಗರದಲ್ಲಿ ವಿಧಾನಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
‘ಅನೇಕ ವರ್ಷಗಳಿಂದ ನಗರದ ಇಂದಿರಾ ಗಾಂಧಿ ಗಾಜಿನ ಮನೆಯಲ್ಲಿ ಮಿಣಜಗಿ ಆರ್ಟ್ ಗ್ಯಾಲರಿ ಕಾರ್ಯನಿರ್ವಹಿಸುತ್ತಿತ್ತು. ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿಯಿಂದಾಗಿ ಗ್ಯಾಲರಿಯನ್ನು ಬಂದ್ ಮಾಡಲಾಗಿದೆ. ಕಲಾವಿದರಿಗೆ ಚಿತ್ರಕಲೆ ಪ್ರದರ್ಶಿಸಲು ನಗರದಲ್ಲಿ ಗ್ಯಾಲರಿಯಿಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿರುವ ಗ್ಯಾಲರಿಯನ್ನು ತೆರೆದು ಕಲಾವಿದರಿಗೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಈಗಿರುವ ವಿದ್ಯಾನಗರದ ಪೊಲೀಸ್ ಠಾಣೆ, ಮೊದಲು ಚಿಕ್ಕವೀರಯ್ಯ ಆರ್ಟ್ ಗ್ಯಾಲರಿಯಾಗಿತ್ತು. ಅದನ್ನಾದರೂ ಪುನಃ ಆರ್ಟ್ ಗ್ಯಾಲರಿಯನ್ನಾಗಿ ಮಾರ್ಪಡಿಸಿ ಕಲಾವಿದರಿಗೆ ನೀಡಬೇಕು’ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಆರ್.ಬಿ. ಗರಗ, ಬಿ.ಆರ್. ಮಲ್ಲಾಪುರ, ಪ್ರೊ.ಐ.ಜಿ. ಸನದಿ, ಗೋವಿಂದ ಮಣ್ಣೂರು, ಶಿವರುದ್ರಪ್ಪ ಬಡಿಗೇರ ಜಗದೀಶ ಗದಗಿನ ಸೇರಿ ಕಲಾವಿದರು ಇದ್ದರು.