ಕೋಪನ್ ಹ್ಯಾಗನ್: ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ (Quran) ಪ್ರತಿಗಳನ್ನು ಸುಡುವುದನ್ನು ತಡೆಯುವ ಮಸೂದೆಗೆ ಡೆನ್ಮಾರ್ಕ್ (Denmark) ಸಂಸತ್ ಗುರುವಾರ ಅನುಮೋದನೆ ನೀಡಿದೆ. ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಮೇಲೆ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಡ್ಯಾನಿಶ್ ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವುದನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ತು ಗುರುವಾರ ಅಂಗೀಕರಿಸಿತು.
ಡೆನ್ಮಾರ್ಕ್ ಮತ್ತು ಸ್ವೀಡನ್ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳ ಪರಿಣಾಮ ಎದುರಿಸಿದವು. ಅಲ್ಲಿ ಇಸ್ಲಾಂ ವಿರೋಧಿ ಕಾರ್ಯಕರ್ತರು ಕುರಾನ್ನ ಪ್ರತಿಗಳನ್ನು ಸುಟ್ಟುಹಾಕಿದರು. ಇದರಿಂದ ಮುಸ್ಲಿಮರೊಂದಿಗೆ ಉದ್ವಿಗ್ನತೆ ಉಂಟಾಯಿತು. ಇಂತಹ ನಡವಳಿಕೆಗಳಿಗೆ ಕಡಿವಾಣ ಬೀಳಬೇಕು ಎಂದು ಪ್ರಬಲವಾಗಿ ಒತ್ತಾಯಿಸಲಾಯಿತು.
ಕುರಾನ್ ಪ್ರತಿಗಳನ್ನು ಸುಡುವುದು, ಧರ್ಮವನ್ನು ಟೀಕಿಸುವುದು ಸರಿಯಲ್ಲ. ಇಂತಹ ನಡವಳಿಕೆಗಳು ಈ ನೆಲದ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಸ್ವೀಡನ್ ಮತ್ತು ಡೆನ್ಮಾರ್ಕ್ನ ದೇಶೀಯ ವಿಮರ್ಶಕರು ವಾದಿಸಿದ್ದಾರೆ. ಈ ಹೊಸ ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ. ಇತರ ರೀತಿಯಲ್ಲಿ ಧರ್ಮವನ್ನು ಟೀಕಿಸುವುದು ಕಾನೂನುಬದ್ಧವಾಗಿ ಉಳಿಯುತ್ತದೆ ಎಂದು ಡೆನ್ಮಾರ್ಕ್ನ ಕೇಂದ್ರೀಯ ಸಮ್ಮಿಶ್ರ ಸರ್ಕಾರ ಅಭಿಪ್ರಾಯಪಟ್ಟಿದೆ.