ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ಜಮೀನನಲ್ಲಿ ಖಾಸಗಿ ಕಂಪನಿಯ ಸಿಬ್ಬಂದಿಗಳು ಜೆಸಿಬಿ ಬಳಸಿ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ. ಆರ್ಐಪಿಎಲ್ ಮೈನಿಂಗ್ ಕಂಪೆನಿಗೆ ವಿಸ್ತರಣೆಗಾಗಿ ಜಮೀನು ನೀಡಿಲ್ಲ ಎಂದು ರೈತರ ಮೇಲಿನ ಸಿಟ್ಟನ್ನು ಅವರು ಬೆಳೆದ ಬೆಳೆಯನ್ನು ನಾಶ ಮಾಡುವ ಮೂಲಕ ತೋರಿಸಿದ್ದಾರೆ. ಆರ್ಐಪಿಎಲ್ನ ಈ ದೌರ್ಜನ್ಯದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಡೂರಿನ ರಣಜಿತ್ಪುರ ಗ್ರಾಮದಲ್ಲಿ ನಡೆದಿರುವ ಈ ಘಟನೆಯಲ್ಲಿ ಸಾವಿರಾರು ರೂ. ಮೌಲ್ಯದ ಬೆಳೆ ನಾಶವಾಗಿದ್ದು, ರಾತ್ರಿ ಕಳೆದು ಬೆಳಗಾಗುವದರೊಳಗೆ ತಮ್ಮ ಶ್ರಮದ ಫಲವು ನಾಶವಾಗಿರುವುದನ್ನು ಕಂಡ ರೈತರು ದುಃಖಿತರಾಗುವುದರ ಜೋತೆಗೆ ಆಕ್ರೋಶಗೊಂಡಿದ್ದಾರೆ. ಕಾಡಪ್ಪ ಮತ್ತು ಪರಮೇಶ್ವರಪ್ಪ ಸೇರಿದಂತೆ ಇತರೆ ರೈತರ ಬೆಳೆನಾಶವಾಗಿದೆ. ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ವಿವಿಧ ಕೃಷಿ ಪರಿಕಗಳು ಈ ಘಟನೆಯಲ್ಲಿ ನಾಶವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಆರ್ಐಪಿಎಲ್ ಕಂಪನಿಯವರು ತಮ್ಮ ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ತೆಗೆದುಕೊಳ್ಳಲು ಪಯತ್ನ ನಡೆಸಿತ್ತು. ಆದರೇ ರೈತರು ಭೂಮಿ ನೀಡುವುದಕ್ಕೆ ನಿರಾಕರಿಸಿದ್ದರು. ಕೆಐಡಿಬಿ ಮೂಲಕ ಖಾಸಗಿ ಕಂಪನಿ ರೈತರ ಮೇಲೆ ಒತ್ತಡ ಹಾಕುವ ಪ್ರಯತ್ನ ಕೂಡಾ ನಡೆದಿತ್ತು ಎಂದು ರೈತರು ಆರೋಪಿಸಿದ್ದಾರೆ. ಕಂಪೆನಿ ಹಾಗೂ ರೈತರ ನಡುವಿನ ವ್ಯಾಜ್ಯ ಧಾರವಾಡ ಹೈಕೋರ್ಟ್ನಲ್ಲಿ ನಡೆಯುತ್ತಿದೆ.
ಇದರ ನಡುವೆ ರಾತ್ರೋರಾತ್ರಿ ಕಂಪನಿಯವರು ಜಮೀನಿನಲ್ಲಿ ಬೆಳೆದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ನಾಶ ಮಾಡಿರುವ ಘಟನೆಯಿಂದ ಮಳೆ ಇಲ್ಲದೇ ಕಂಗಾಲಾಗಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಖಾಸಗಿ ಕಂಪನಿ ವಿರುದ್ಧ ಸಿಡಿದೆದ್ದಿರುವ ರೈತರು ಪೊಲೀಸ್ ಠಾಣೆ ಮೆಟ್ಡಿಲೇರಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.