ಬೆಳಗಾವಿ:- ಕಳೆದ 45 ದಿನಗಳಲ್ಲಿ 5729 ಮನೆಗಳಿಗೆ ಭೇಟಿ ನೀಡಿ, ವಿದೇಶಿಗರು ವಾಸಿಸುವ 28 ಹಾಟ್ ಸ್ಪಾಟ್ ಗುರುತಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ವಿಧಾನ ಪರಿಷತ್ ನಲ್ಲಿ ಉತ್ತರಿಸಿದ ಸಚಿವರು, ಬಾಂಗ್ಲಾ ವಲಸಿಗರ ಪತ್ತೆಗೆ ನಮ್ಮ ಗುಪ್ತ ದಳ ಜಾಗೃತಗೊಳಿಸಲಾಗಿದೆ, ಹೊಸದಾಗಿ ಕಂಡು ಬರುವ ಬೇರೆ ಭಾಷಿಕರನ್ನು ಗುರುತಿಸಿ, ಅವರ ಪಾಸ್ ಪೋರ್ಟ್ ಪರಿಶೀಲಿಸಿ ಪತ್ತೆ ಹಚ್ಚಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ ಅಕ್ರಮ ಬಾಂಗ್ಲಾ ಮತ್ತು ವಿದೇಶಿಯರ ವಿರುದ್ಧ ಒಟ್ಟು 764 ಪ್ರಕರಣ ದಾಖಲಾಗಿದ್ದು, ಈ ಪೈಕಿ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳ ಹಾಗೂ ವಿದೇಶಿಗರ ವಿರುದ್ಧ 711 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು 135 ಜನ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿರುವ ಏಜೆಂಟ್ಗಳನ್ನು ಪತ್ತೆ ಮಾಡಿದ್ದು ಈ ಸಂಬಂಧ 4 ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ವಾಸಿಸುತ್ತಿರುವ 14 ಜನ ಪುರುಷರು ಹಾಗೂ 23 ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಎಂದರು.