ಬೆಳಗಾವಿ:- ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ 2017-18 ಬಜೆಟ್ಗೆ ಹೋಲಿಸಿದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಾಗೂ ಜಿಎಸ್ಟಿ ಪರಿಹಾರ ಈಗ 40 ಸಾವಿರ ಕೋಟಿ ರು. ಕಡಿಮೆಯಾಗಿದ್ದು, ಇದರಿಂದ ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದರು.
ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2017-18ರಲ್ಲಿ ರಾಜ್ಯದ ಬಜೆಟ್ ಗಾತ್ರ 1.86 ಲಕ್ಷ ಕೋಟಿ ಇದ್ದ ವೇಳೆ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಯಡಿ ಒಟ್ಟು 43,369 ಕೋಟಿ ರು. (ಶೇ. 23) ಬಂದಿತ್ತು. ಆದರೆ ಈಗ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ಇದ್ದರೂ ಕೇಂದ್ರದಿಂದ ಬರುವ ಮೊತ್ತ ಶೇ.17.5 ಕ್ಕೆ ಇಳಿದಿದೆ. ಶೇ.23ರಂತೆ ಲೆಕ್ಕ ಹಾಕಿದರೆ 76 ಸಾವಿರ ಕೋಟಿ ಬರುವ ಬದಲು 56 ಸಾವಿರ ಕೋಟಿ ಬರುತ್ತಿದೆ, ಅದೇ ರೀತಿ ಜಿಎಸ್ಟಿ ಪರಿಹಾರ ಸಹ 20 ಸಾವಿರ ಕೋಟಿ ರು. ಕಡಿಮೆಯಾಗಿದೆ. ಹೀಗಾಗಿ ಒಟ್ಟಾರೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಮೊತ್ತ 40 ಸಾವಿರ ಕೋಟಿ ರು. ಕಡಿಮೆಯಾಗಿದೆ. ಇದರ ಪರಿಣಾಮ ನಮ್ಮ ಆರ್ಥಿಕ ಸಂಪನ್ಮೂಲಗಳ ಮೂಲಕ ಕ್ರೋಢಿಕರಣ ಮಾಡುವ ಒತ್ತಡ ಹೆಚ್ಚಾಗಿದೆ ಎಂದರು.
ಈ ವರ್ಷ ಕೇಂದ್ರ ಪುರಸ್ಕೃತ ಯೋಜನೆಯಡಿ ಕೆಲವು ಇಲಾಖೆಗೆ ಹಣ ಬಂದಿದೆ. ಇನ್ನೂ ಕೆಲವುಗಳಿಗೆ ಬಂದಿಲ್ಲ, ಮಾರ್ಚ್ವರೆಗೆ ಅವಕಾಶ ಇರುವುದರಿಂದ ಸುಮಾರು 56 ಸಾವಿರ ಕೋಟಿ ರು. ಹಣ ಬರುವ ನಿರೀಕ್ಷೆ ಇದೆ ಎಂದರು.