ಹುಬ್ಬಳ್ಳಿ: ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶದೆಲ್ಲೆಡೆ ಜಾತಿಗಣತಿ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಆಧರಿಸಿ ಅವೈಜ್ಞಾನಿಕವಾಗಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ವರಿಗೂ ಸಕಲ ಸೌಲಭ್ಯ ಸಿಗಲು ಜಾತಿಗಣತಿ ಅವಶ್ಯ. ರಾಜ್ಯದಲ್ಲಿ ನಡೆದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿ, ಸದನದ ಮುಂದಿಡಬೇಕು ಎಂದು ಒತ್ತಾಯಿಸಿದರು.
ಗೂಳಿಹಟ್ಟಿ ಶೇಖರ್ ಅವರನ್ನು ನಾಗಪುರದ ಹೆಗಡೇವಾರ್ ಸ್ಮಾರಕದೊಳಗೆ ಬಿಡದಿರುವ ಘಟನೆ ಜಾತಿ ಕಾರಣಕ್ಕೇ ನಡೆದಿದ್ದರೆ ಖಂಡನೀಯ. ಆರ್ ಎಸ್ಎಸ್ ಇದಕ್ಕೆ ತಲೆಬಾಗಬೇಕು. ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ಆಹ್ವಾನವನ್ನೇ ನೀಡುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರವಿಡಲಾಗುತ್ತಿತ್ತು ಎಂದು ಹೇಳಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಒಗ್ಗಟ್ಟು ಪ್ರದರ್ಶಿಸಬೇಕಿತ್ತು. ಒಗ್ಗಟ್ಟು ಮೂಡದ ಕಾರಣ ಭಾರಿ ಹಿನ್ನಡೆ ಅನುಭವಿಸುವಂತಾಯಿತು. ಲೋಕಸಭೆ ಚುನಾವಣೆಯ ದೃಷ್ಟಿಯಿಂದಾದರೂ ನಾಯಕತ್ವ ಘೋಷಿಸಿ, ಬಿಜೆಪಿ ಎದುರಿಸಬೇಕು ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಗಳಡಿ ನಡೆದ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು, ರಾಜ್ಯ ಹಾಗೂ ಕೇಂದ್ರದ ಅನುದಾನ, ಖರ್ಚು- ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಜಾತಿರಾಜಕಾರಣ, ಕುಟುಂಬ ರಾಜಕಾರಣ ಹೆಚ್ಚುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಪರಿಹಾರವಾಗಿ ಪರ್ಯಾಯ ರಾಜಕೀಯ ವ್ಯವಸ್ಥೆ ಅಗತ್ಯವಿದೆ. ಆಮ್ ಆದ್ಮಿ ಪಕ್ಷದಿಂದ ಈ ಬಗ್ಗೆ ಜಾಗೃತಿ ಮೂಡಿಸಲು, ಗ್ರಾಮ ಮಟ್ಟದಲ್ಲಿ ಜನರೊಂದಿಗೆ ಸಮಾಲೋಚನೆ ಸಭೆ ನಡೆಸಲಾಗುತ್ತಿದೆ ಎಂದರು.