ದಾವಣಗೆರೆ:– ಕೋಳಿ ಸಾರು ಮಾಡಿಲ್ಲ ಎಂದು ಪತ್ನಿಯ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.
10 ಸಾವಿರ ರೂ ದಂಡವನ್ನೂ ವಿಧಿಸಿದೆ. ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಮಾಗನಹಳ್ಳಿ ಕೆಂಚಪ್ಪ ಶಿಕ್ಷೆಗೊಳಗಾದ ಅಪರಾಧಿ.
2022ರ ಜೂನ್ 8ರಂದು ಇಲ್ಲಿನ ಬನ್ನಿಕೋಡು ಗ್ರಾಮದಲ್ಲಿ ಘಟನೆ ನಡೆದಿತ್ತು. ಕಂಠಪೂರ್ತಿ ಕುಡಿದು ಬಂದಿದ್ದ ಕೆಂಚಪ್ಪ ತನ್ನ ಪತ್ನಿಯಲ್ಲಿ ಏಕೆ ಕೋಳಿ ಸಾರು (ಚಿಕನ್) ಅಡುಗೆ ತಯಾರು ಮಾಡಿಲ್ಲ ಎಂದು ಪ್ರಶ್ನಿಸಿದ್ದ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಕೆಂಚಪ್ಪ ತನ್ನ ಪತ್ನಿ ಶೀಲಾ ಅವರಿಗೆ ಚಾಕುವಿನಿಂದ ಎಡಭುಜಕ್ಕೆ ಇರಿದು ಹತ್ಯೆ ಮಾಡಿದ್ದನು. ಈ ಕುರಿತು ಶೀಲಾ ಅವರ ತಾಯಿ ಉಕ್ಕಡಗಾತ್ರಿ ಮೂಲದ ಗುತ್ಯಮ್ಮ ಅವರು ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ತನಿಖಾಧಿಕಾರಿ ಸಿಪಿಐ ಸತೀಶ್ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಆಲಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಜೆ.ವಿ.ವಿಜಯಾನಂದ ಅಪರಾಧಿ ಕೆಂಚಪ್ಪನಿಗೆ 6 ವರ್ಷ ಸಜೆ ಹಾಗು ಹತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.