ಬೆಂಗಳೂರು/ಬೆಳಗಾವಿ:- ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿಲ್ಲ. ಹಾಗೆಯೇ ಪ್ರತಿ ಜಿಲ್ಲೆಯಲ್ಲೂ ಸಿಂಥೆಟಿಕ್ ಟ್ರ್ಯಾಕ್ಗಳ ನಿರ್ಮಾಣದ ಬಗ್ಗೆ ಹೇಳಲಾಗಿತ್ತು. ಈ ಯೋಜನೆಯ ಎಲ್ಲಿಯವರೆಗೆ ತಲುಪಿದೆ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ನಾಗೇಂದ್ರ, ರಾಜ್ಯದಲ್ಲಿ ಅಮೃತ ಕ್ರೀಡಾ ದತ್ತಿ ಯೋಜನೆಯಡಿ 75 ಮಂದಿಯನ್ನು ಆಯ್ಕೆ ಮಾಡಿಕೊಂಡು ತರಬೇತಿ ಕೊಡಿಸಲಾಗುತ್ತಿದೆ. ಜೊತೆಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ ಸೇರಿದಂತೆ ಹಲವು ಸೌಲಭ್ಯಗಳ ಮೂಲಕ ಕ್ರೀಡೆಗೆ ಬೆಂಬಲ ನೀಡಲಾಗುತ್ತಿದೆ ಎಂದರು.
2024ರ ಒಲಿಂಪಿಕ್ ಕ್ರೀಡೆಗೆ ಸಜ್ಜುಗೊಳ್ಳುವ ಕ್ರೀಡಾಪಟುಗಳಿಗೆ ಆಹಾರದಿಂದ ಹಿಡಿದು ಎಲ್ಲಾ ರೀತಿಯ ಕಾಳಜಿಯನ್ನು ವಹಿಸಲಾಗುತ್ತಿದೆ. ಪ್ರತಿಯೊಬ್ಬರ ತರಬೇತಿಗೆ 10 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. 180 ದೈಹಿಕ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಬಗ್ಗೆ ತರಬೇತಿ ನಡೆಯುತ್ತಿದೆ. ಶೀಘ್ರವೇ ಅವರು ಸೇವೆಗೆ ಸಮರ್ಪಣೆಗೊಳ್ಳಲಿದ್ದಾರೆ. ಈ ಮೂಲಕ ತರಬೇತುದಾರರ ಕೊರತೆಯೂ ನೀಗಲಿದೆ ಎಂದು ಹೇಳಿದರು.
ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಂದ್ರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧೀನದಲ್ಲಿ ರಾಜ್ಯಾದ್ಯಂತ 125 ಕ್ರೀಡಾಂಗಣಗಳಿವೆ. ಕ್ರೀಡಾಂಗಣಗಳ ಅಭಿವೃದ್ಧಿಗೆ 5,622 ಲಕ್ಷ ರೂಪಾಯಿಗಳನ್ನು 2 ವರ್ಷಗಳಿಂದ ಬಿಡುಗಡೆ ಮಾಡಲಾಗಿದೆ. ಹಣಕಾಸು ಲಭ್ಯತೆ ನೋಡಿಕೊಂಡು 16 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣಗಳ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.