ಇಸ್ಲಾಮಾಬಾದ್: ಭಾರತಕ್ಕೆ (India) ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರು ಪಾಕಿಸ್ತಾನದಲ್ಲಿ (Pakistan) ಅನಾಮಿಕ ವ್ಯಕ್ತಿಗಳ ಗುಂಡೇಟಿಗೆ ಬಲಿಯಾಗುವುದು ಈಗ ಹೊಸದೆನಲ್ಲ. ಆದರೆ ಈಗ ಉಗ್ರನೊಬ್ಬ ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವುದು ಹೊಸದು. ಮುಂಬೈ ದಾಳಿಯ (Mumbai 26/11 Attacks) ಪ್ರಮುಖ ಸಂಚುಕೋರ, ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಸದಸ್ಯ ಸಾಜಿದ್ ಮಿರ್ (Sajid Mir) ವಿಷ ಆಹಾರ ಸೇವಿಸಿದ್ದು ಸದ್ಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ಕೆಲವು ತಿಂಗಳ ಹಿಂದೆ ಸಾಜಿದ್ ಮಿರ್ನನ್ನು ಲಾಹೋರ್ ಜೈಲಿನಿಂದ ಡೇರಾ ಘಾಜಿ ಖಾನ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಸದ್ಯ ವಿಷ ಆಹಾರ ಸೇವಿಸಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಾಜಿದ್ ಮಿರ್ನನ್ನು ಪಾಕಿಸ್ತಾನ ಸೇನೆ ಏರ್ಲಿಫ್ಟ್ ಮಾಡಿ ಬಹವಾಲ್ಪುರದ ಸಿಎಂಎಚ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿಗೆ ದಾಖಲಿಸಲಾಗಿದೆ. ವಿಷ ಪ್ರಾಶನ ಪ್ರಕರಣ ವರದಿಯಾದ ಬೆನ್ನಲ್ಲೇ ಜೈಲಿನಲ್ಲಿದ್ದ ಅಡುಗೆ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ.
ಯಾರು ಈ ಸಾಜಿದ್ ಮಿರ್?
ಸಾಜಿದ್ ಮಿರ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್ಇಟಿ) ಹಿರಿಯ ಸದಸ್ಯನಾಗಿದ್ದು 2008ರ ನವೆಂಬರ್ನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದಾನೆ.
ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಪಾತ್ರಕ್ಕಾಗಿ ಅಮೆರಿಕ ಆತನ ತಲೆಗೆ 5 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದೆ. 2022ರ ಜೂನ್ನಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆ-ಹಣಕಾಸಿನ ಪ್ರಕರಣದಲ್ಲಿ ಮೀರ್ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಮಿರ್ ಸತ್ತಿದ್ದಾನೆ ಎಂದು ಹೇಳಿದ್ದರು. ಆದರೆ ಈತನ ಸಾವಿಗೆ ಪುರಾವೆ ನೀಡುವಂತೆ ಭಾರತ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಒತ್ತಾಯಿಸಿದ್ದವು. ಈ ವರ್ಷದ ಜೂನ್ನಲ್ಲಿ ಈತನನ್ನು ಜಾಗತಿಕ ಭಯೋತ್ಪಾದಕ ಪಟ್ಟಿ ಸೇರಿಸಲು ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ನಿರ್ಣಯವನ್ನು ಚೀನಾ ವಿರೋಧಿಸಿತ್ತು.