ನವದೆಹಲಿ:– ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಬೇಗ ಪರಿಹಾರ ಬಿಡುಗಡೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ಆಗ್ರಹ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಈ ಬಗ್ಗೆ ವಿಚಾರಿಸಲು 2 ದಿನದ ಹಿಂದೆ ನಾನು ಪ್ರಾಂಜಲ್ ತಂದೆಗೆ ಫೋನ್ ಮಾಡಿದ್ದೆ. ಸರ್ಕಾರದ ವತಿಯಿಂದ ಯಾರಾದರೂ ಫೋನ್ ಮಾಡಿ ಮಾತನಾಡಿದರೇ ಎಂದು ಕೇಳಿದೆ. ಅವರ ತಂದೆ ‘ಇವತ್ತಿನವರೆಗೂ ಸಹ ನನಗೆ ಯಾವುದೇ ಫೋನ್ ಬಂದಿಲ್ಲ’ ಅಂತ ಹೇಳಿದರು ಎಂದರು.
ಪ್ರಾಂಜಲ್ ಕುಟುಂಬಕ್ಕೆ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಸೂರ್ಯ ಹೇಳಿದರು. ಯಾರು ಪ್ರಾಂಜಲ್ ಅಂದ್ರೆ, ನಾವೆಲ್ಲಿ ಪರಿಹಾರ ಕೊಡ್ತೀವಿ ಅಂತ ಹೇಳಿದ್ವಿ’ ಎಂದು ಸಿಎಂ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ. ಓರ್ವ ಯೋಧನ ಬಗ್ಗೆ ಹೀಗೆ ಮುಖ್ಯಮಂತ್ರಿಗಳು ಮಾತನಾಡಿದ್ದು ನೋಡಿ ಬಹಳ ಬೇಸರವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಮಾಧ್ಯಮದವರ ಮುಂದೆಯೇ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದೀಗ ಅವರು ಯಾರೆಂಬುದೇ ಗೊತ್ತಿಲ್ಲವೆಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಬೇರೆ ಯೋಧರಿಗೂ ಸಹ ನನ್ನ ಪರಿಸ್ಥಿತಿ ಹೀಗಾದರೆ ಎಂಬ ಯೋಚನೆ ಮೂಡಬಹುದು. ಮುಖ್ಯಮಂತ್ರಿಗಳು ಎಲ್ಲರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.