ಬೆಂಗಳೂರು:- ದಾವಣಗೆರೆ ಜಿಲ್ಲೆಯಲ್ಲಿ ಖರಾಬು ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಲಾಗಿದೆ.
ಸರ್ಕಾರಿ ಕೆರೆಗೆ ಮತ್ತು ಖರಾಬು ಜಮೀನಿಗೆ ಸೇರಿದ ಸುಮಾರು 28 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ನಗರ ಕಾರ್ಯಕಾರಿ ಎಂಜಿನಿಯರ್, ಜಿಲ್ಲಾಧಿಕಾರಿ, ಉಪ ವಲಯದ ಉಪ ವಿಭಾಗಾಧಿಕಾರಿ ಮತ್ತು ಒತ್ತುವರಿದಾರರು ಎನ್ನಲಾದ ಹನುಮಂತ ರೆಡ್ಡಿ, ಬಾಬುರೆಡ್ಡಿ, ರಾಜಶೇಖರ ರೆಡ್ಡಿ ಮತ್ತು ಪ್ರಹ್ಲಾದ್ ರೆಡ್ಡಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಸರ್ಕಾರದ ಜಾಗದ ಒತ್ತುವರಿಯನ್ನು ಒಪ್ಪಲಾಗದು. ಕೆರೆ ಮತ್ತು ಖರಾಬು ಜಮೀನನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.